ನವದೆಹಲಿ:ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್(ಇವಿಎಂ) ಬಳಿಕ ಮತ ಎಣಿಕೆ ಸುಲಲಿತ, ತೀಕ್ಷ್ಣ ಮತ್ತು ನಿಖರವಾಗಿದೆ. ಇದರ ಜೊತೆಗೆ ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆ ನಡೆಸಿದಲ್ಲಿ ಅದು ಈ ಹಿಂದಿನ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಿದಂತೆ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ.
ಮತದಾರ ಹಾಕಿದ ಮತ ನಿಖರವಾಗಿದೆ ಎಂಬುದನ್ನು ತಿಳಿಯಲು ಮತ್ತು ಇವಿಎಂಗಳ ಮೇಲಿನ ದೋಷದ ಮೇಲೆ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ವಿವಿಪ್ಯಾಟ್ ಎಣಿಕೆಯ ಬಗ್ಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು. ಅದರಂತೆ ಚುನಾವಣಾ ಆಯೋಗ ವಿವಿಪ್ಯಾಟ್ಗಳ ಎಣಿಕೆ ಏಕೆ ಬೇಡ ಎಂಬುದನ್ನು ಅಫಡವಿಟ್ನಲ್ಲಿ ವಿವರವಾಗಿ ಹೇಳಿದೆ.
ಶೇ.100ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಯು ಇವಿಎಂ ಬಳಕೆಗೆ ವಿರುದ್ಧವಾಗಿದೆ. ಇದು ನಮ್ಮನ್ನು ಈ ಹಿಂದಿನ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಮರಳಿಸುತ್ತದೆ. ಇವಿಎಂ ಎಣಿಕೆ ಮತ್ತು ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆ ನಡುವೆ ವ್ಯತ್ಯಾಸವಿಲ್ಲ. ಇದರಲ್ಲಿ ಮಾನವ ದೋಷದಿಂದ ಮಾತ್ರ ಹೆಚ್ಚು ಕಡಿಮೆ ಫಲಿತಾಂಶ ಬರಬಹುದೇ ವಿನಹಃ ತಾಂತ್ರಿಕವಾಗಿ ಎರಡೂ ಸಮಾನವಾಗಿವೆ ಎಂದು ವರದಿಯಲ್ಲಿ ಹೇಳಿದೆ.
ಚುನಾವಣಾ ಆಯೋಗ 469 ಪುಟಗಳ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಮತದಾರ ತಮ್ಮ ಮತವನ್ನು ಚಲಾಯಿಸಲಾಗಿದೆ ಎಂಬು ನಿಖರವಾಗಿ ಇವಿಎಂ ಮತ್ತು ವಿವಿಪ್ಯಾಟ್ನಲ್ಲಿ ದಾಖಲಾಗುತ್ತದೆ. ಇದನ್ನು ಮತದಾರ ವಿವಿಪ್ಯಾಟ್ ಮೂಲಕ ಪರಿಶೀಲಿಸುವ ಹಕ್ಕು ಇಲ್ಲ. ವಿವಿಪ್ಯಾಟ್ ಮೂಲಭೂತವಾಗಿ ಮತದಾರನ ಮತ ಬ್ಯಾಲೆಟ್ ಯೂನಿಟ್‌ನಲ್ಲಿ ದಾಖಲಾಗುವ 'ಆಡಿಟ್ ಟ್ರಯಲ್' ಆಗಿದೆ. ಇವಿಎಂಗಳೇ ನಿಖರವಾದ ಮಾಹಿತಿ ನೀಡುವುದರಿಂದ ವಿವಿಪ್ಯಾಟ್ಗಳ ಅಗತ್ಯವಿಲ್ಲ. ಹಾಗೊಂದು ವೇಳೆ ಅವುಗಳಲ್ಲಿ ಸ್ಲಿಪ್‌ಗಳ ಎಣಿಕೆ ನಡೆಸಿದಲ್ಲಿ ನಾವು ಹಿಂದಿನ ಪದ್ಧತಿಯಾದ ಬ್ಯಾಲೆಟ್ ಪೇಪರ್ ಎಣಿಕೆಗೆ ಸಮಾನವಾಗುತ್ತದೆ. ಹೀಗಾಗಿ ಮನವಿಯನ್ನು ವಜಾ ಮಾಡಬೇಕು ಎಂದು ಕೋರಿದೆ.