ಜೈಪುರ, ರಾಜಸ್ಥಾನ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುಂದುವರಿದಿದೆ. ಸದ್ಯ ರಾಜಸ್ಥಾನದಲ್ಲಿ ನಡೆಯುತ್ತಿರುವ ಈ ಯಾತ್ರೆ ಇಂದು100 ದಿನ ಪೂರೈಸಲಿದೆ. ಮೂರು ತಿಂಗಳಿಗೂ ಹೆಚ್ಚು ಕಾಲ ಈ ಯಾತ್ರೆಯನ್ನು ಮುಂದುವರೆಸಿರುವ ಪಕ್ಷದ ನಾಯಕ ರಾಹುಲ್ ಗಾಂಧಿ ಎಲ್ಲ ವರ್ಗದ ಜನರೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಸಮಸ್ಯೆಗಳನ್ನು ಅರಿತು ಮುನ್ನಡೆಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಬಹಿರಂಗಪಡಿಸಿವೆ.
ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭ:ಸೆಪ್ಟೆಂಬರ್ 7 ರಂದು ತಮಿಳುನಾಡಿನಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆ ಇದುವರೆಗೆ ಎಂಟು ರಾಜ್ಯಗಳಲ್ಲಿ ಮುಂದುವರೆದಿದೆ. ತಮಿಳುನಾಡು ಸೇರಿದಂತೆ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ಣಗೊಂಡಿದ್ದು, ಪ್ರಸ್ತುತ ರಾಜಸ್ಥಾನದಲ್ಲಿ ಮುಂದುವರಿದಿದೆ. ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಡಿಸೆಂಬರ್ 24 ರಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಲಿದೆ. ಆ ಬಳಿಕ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಸಂಚರಿಸಿ ಅಂತಿಮವಾಗಿ ಜಮ್ಮು-ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ರಾಹುಲ್ ಗಾಂಧಿ ಕೈಗೊಂಡಿರುವ ಈ ಸುದೀರ್ಘ ನಡಿಗೆಯ ಗುರಿ 3,500 ಕಿ.ಮೀ ಆಗಿದ್ದರೆ, ಈಗಾಗಲೇ 2800 ಕಿ.ಮೀ ಪೂರ್ಣಗೊಂಡಿದೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ:ಬಿಜೆಪಿಯ ನೀತಿಗಳ ವಿರುದ್ಧ ಜನರನ್ನು ಒಗ್ಗೂಡಿಸುವುದು ನನ್ನ ಪ್ರಯತ್ನ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದರೆ, ಬಿಜೆಪಿ ಕಾಂಗ್ರೆಸ್ ನಾಯಕನನ್ನು ಟೀಕಿಸುತ್ತಲೇ ಇದೆ. ಯಾತ್ರೆ ಆರಂಭದಲ್ಲಿ ರಾಹುಲ್ ಧರಿಸಿದ್ದ ಟೀ ಶರ್ಟ್ ಅತ್ಯಂತ ದುಬಾರಿ (41 ಸಾವಿರ) ಎಂದು ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ, ಬಿಜೆಪಿ ನಾಯಕ ಮತ್ತು ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ಅವರನ್ನು ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್‌ನಂತೆ ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ರಾಜಕೀಯ ವಿಶ್ಲೇಷಕರ ಅಭಿಪ್ರಾಯ:ಮಹಾರಾಷ್ಟ್ರದಲ್ಲಿ ಈ ಯಾತ್ರೆ ನಡೆಯುತ್ತಿರುವಾಗ, 'ವಿಡಿ ಸಾವರ್ಕರ್' ಬಗ್ಗೆ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ನಡೆಯಿತು. ಇದರೊಂದಿಗೆ ಮಧ್ಯಪ್ರದೇಶದಲ್ಲಿ ಪಾದಯಾತ್ರೆ ನಡೆಯುತ್ತಿರುವಾಗಲೇ ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಅಗ್ರ ನಾಯಕರ ನಡುವಿನ ಪ್ರಾಬಲ್ಯದ ಹೋರಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದೆಲ್ಲ ಈಗ ಇತ್ಯರ್ಥವಾದರೂ ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.