ನವದೆಹಲಿ: 100 ಕೋಟಿ ಲಸಿಕೆ ಅಂದರೆ ಇದು ಕೇವಲ ಸಂಖ್ಯೆಯಲ್ಲ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯ, ಭಾರತವು ಯಾವುದೇ ಕಠಿಣ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜನವರಿ 16ರಿಂದ ನಿನ್ನೆಯವರೆಗೆ ಕೋವಿಡ್ ಲಸಿಕೆಯ 100 ಕೋಟಿಗೂ ಅಧಿಕ ಡೋಸ್ ನೀಡುವ ಮೂಲಕ ಭಾರತ ಮೈಲಿಗಲ್ಲು ಸಾಧಿಸಿದ್ದು, ಈ ಕುರಿತು ಇಂದು ಪಿಎಂ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಅಕ್ಟೋಬರ್ 21 ರಂದು, ಭಾರತವು 1 ಬಿಲಿಯನ್ ಕೋವಿಡ್ -19 ಲಸಿಕೆಗಳ ಗುರಿಯನ್ನು ಸಾಧಿಸಿತು. ಈ ಸಾಧನೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದೆ. ಈ ಸಾಧನೆಗಾಗಿ ನಾನು ಪ್ರತಿಯೊಬ್ಬ ನಾಗರಿಕನನ್ನು ಅಭಿನಂದಿಸುತ್ತೇನೆ ಎಂದರು.
ವಿಜ್ಞಾನ ಆಧಾರಿತ ವ್ಯಾಕ್ಸಿನೇಷನ್
ಭಾರತದ ವ್ಯಾಕ್ಸಿನೇಷನ್ ಕಾರ್ಯಕ್ರಮವು ಸಂಪೂರ್ಣ ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ. ಕವಚ ಎಷ್ಟು ಉತ್ತಮ, ಎಷ್ಟು ಆಧುನಿಕವಾಗಿರುತ್ತೋ ಅಷ್ಟೇ ನಮಗೆ ರಕ್ಷಣೆ ಸಿಗುತ್ತದೆ ಎಂದು ಕೊರೊನಾ ಲಸಿಕೆಗಳ ಸುರಕ್ಷತೆ, ಪರಿಣಾಮಕಾರಿತ್ವವನ್ನು ಮೋದಿ ಶ್ಲಾಘಿಸಿದರು.
ಭಾರತದ ಲಸಿಕಾಭಿಯಾನವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್'ನ ಒಂದು ಜೀವಂತ ಉದಾಹರಣೆಯಾಗಿದೆ. ವಿಐಪಿ ಸಂಸ್ಕೃತಿಯು ನಮ್ಮ ಲಸಿಕಾ ಕಾರ್ಯಕ್ರಮದ ಮೇಲೆ ಪರಿಣಾಮ ಬೀರಲಿಲ್ಲ. ಇಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ನಮ್ಮ ದೇಶದ 'ಕೋವಿನ್' ಫ್ಲಾಟ್ಫಾರ್ಮ್ ಕೇವಲ ಜನರಿಗೆ ಮಾತ್ರ ಸಹಾಯಕಾರಿಯಾಗಲಿಲ್ಲ. ನಮ್ಮ ವೈದ್ಯಕೀಯ ಸಿಬ್ಬಂದಿಯ ಕೆಲಸವನ್ನೂ ಸುಲಭಗೊಳಿಸಿತು. ನಾವೆಲ್ಲರೂ ಮತ್ತಷ್ಟು ಪ್ರಯತ್ನ ಮಾಡಿ ಕೋವಿಡ್ ಅನ್ನು ಸಂಪೂರ್ಣವಾಗಿ ಹೊಡೆದೋಡಿಸುತ್ತೇವೆ ಎಂದು ನಂಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಪ್ರಧಾನಿ ಹೇಳಿದರು.