ಕರ್ನಾಟಕ

karnataka

ETV Bharat / bharat

ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಮೊತ್ತದ ಚೆಕ್ ಹಾಕಿದ ವ್ಯಕ್ತಿಯ ಬ್ಯಾಂಕ್‌ ಖಾತೆಯಲ್ಲಿದ್ದಿದ್ದು 17 ರೂಪಾಯಿ! - ದೇವಸ್ಥಾನದ ಹುಂಡಿಯಲ್ಲಿ 100 ಕೋಟಿ ಚೆಕ್​ ಪತ್ತೆ

ಆಂಧ್ರಪ್ರದೇಶದ ಪ್ರಸಿದ್ಧ ಸಿಂಹಾಚಲಂ ನರಸಿಂಹ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ನೂರು ಕೋಟಿ ರೂ ಮೊತ್ತದ ಚೆಕ್​ ಪತ್ತೆಯಾಗಿದೆ.

ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಚೆಕ್​
ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಚೆಕ್​

By ETV Bharat Karnataka Team

Published : Aug 25, 2023, 11:01 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ):ವಿಶಾಖಪಟ್ಟಣದ ಸುಪ್ರಸಿದ್ಧ ಸಿಂಹಾಚಲಂನ ವರಮಹಾಲಕ್ಷ್ಮೀ ನರಸಿಂಹ ದೇವಸ್ಥಾನದ ಹುಂಡಿಯಲ್ಲಿ ಭಕ್ತರೊಬ್ಬರು ಹಾಕಿರುವ 100 ಕೋಟಿ ರೂ. ಮೊತ್ತದ ಚೆಕ್ ಸಿಕ್ಕಿದೆ. ತಿಂಗಳಲ್ಲಿ ಎರಡು ಬಾರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ನಿನ್ನೆಯೂ (ಗುರುವಾರ) ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ವೇಳೆ ಚೆಕ್ ಸಿಕ್ಕಿದ್ದು ಹುಬ್ಬೇರಿಸಿತ್ತು. ಇಷ್ಟು ದೊಡ್ಡ ಮೊತ್ತದ ಚೆಕ್​ ನೋಡಿ ದೇವಸ್ಥಾನದ ಸಿಬ್ಬಂದಿ ಅರೆಕ್ಷಣ ಹೌಹಾರಿದ್ದಾರೆ.

ಚೆಕ್​ ಅನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ (ಇಒ) ನೀಡಲಾಗಿದೆ. ಇದನ್ನು ಗಮನಿಸಿದ ಇಒ, ಚೆಕ್​ ಬರೆಯುವ ವೇಳೆ ಏನಾದರೂ ತಪ್ಪಾಗಿರಬಹುದು. ಇದು ನಿಜವಾಗಿಯೂ 100 ಕೋಟಿ ರೂಪಾಯಿಗಳ ಚೆಕ್ ಆಗಿದೆಯೇ? ಎಂದು ಪರಿಶೀಲಿಸಲು ಸಂಬಂಧಿಸಿದ ಬ್ಯಾಂಕ್ ಶಾಖೆಯ ಅಧಿಕಾರಿಗೆ ಸೂಚಿಸಿದ್ದಾರೆ. ಬ್ಯಾಂಕ್​ ಅಧಿಕಾರಿ ಪರಿಶೀಲಿಸಿ, ಚೆಕ್ ನೀಡಿದವರ ಖಾತೆಯಲ್ಲಿ ಕೇವಲ 17 ರೂಪಾಯಿ ಮಾತ್ರ ಇದೆ ಎಂದು ತಿಳಿಸಿದ್ದಾರೆ!.

ಆ ವ್ಯಕ್ತಿಯನ್ನು ಗುರುತಿಸಲು ಇಒ ಬ್ಯಾಂಕ್​ ಅಧಿಕಾರಿಗೆ ತಿಳಿಸಿದ್ದಾರೆ. ದಾನಿಯು ದೇವಾಲಯದ ಅಧಿಕಾರಿಗಳಿಗೆ ಮೋಸ ಮಾಡುವ ಉದ್ದೇಶ ಹೊಂದಿದ್ದರೆ, ಆತನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಚೆಕ್‌ನ ಫೋಟೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಇದು ಖಾಸಗಿ ಬ್ಯಾಂಕ್‌ಗೆ ಸೇರಿದ ಚೆಕ್‌ ಆಗಿದ್ದು, ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬವರು ಸಹಿ ಹಾಕಿದ್ದಾರೆ. ಅಲ್ಲದೇ ದಿನಾಂಕದ ಜಾಗವನ್ನು ಖಾಲಿ ಬಿಡಲಾಗಿದೆ. ವಿಶಾಖಪಟ್ಟಣದ ಶಾಖೆಯಲ್ಲಿ ಈ ವ್ಯಕ್ತಿ ಖಾತೆದಾರರು ಎಂದು ಚೆಕ್ ತೋರಿಸುತ್ತದೆ.

ಕಳೆದ ವರ್ಷವೂ ನಡೆದಿತ್ತು ಇಂಥದ್ದೇ ಘಟನೆ: ತೆಲಂಗಾಣ ರಾಜ್ಯದ ಜೋಗುಳಾಂಬ ಜಿಲ್ಲೆಯ ಆಲಂಪುರ ಶಿವನ ದೇವಸ್ಥಾನದ ಹುಂಡಿ ಎಣಿಕೆ ವೇಳೆ 100 ಕೋಟಿ ರೂ ಮೊತ್ತದ ಚೆಕ್​ ಪತ್ತೆಯಾಗಿತ್ತು. ಈ ಬಗ್ಗೆ ದೇವಸ್ಥಾನದ ಅಧಿಕಾರಿಗಳು ಬ್ಯಾಂಕ್​ನಲ್ಲಿ ವಿಚಾರಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಚೆಕ್ ಎಪಿಜಿವಿಬಿ ಬ್ಯಾಂಕ್​ ವಾರಂಗಲ್ ಜಿಲ್ಲೆ ಶಾಖೆಗೆ ಸೇರಿದ್ದಾಗಿತ್ತು. ಆ ಖಾತೆಯಲ್ಲಿ ಕೇವಲ 23 ಸಾವಿರ ರೂ. ಮಾತ್ರ ಇರುವುದು ತಿಳಿದು ಬಂದಿತ್ತು. ಬಳಿಕ ಚೆಕ್​ ಬೌನ್ಸ್​ ಪ್ರಕರಣ ದಾಖಲಿಸಲಾಗಿತ್ತು. ನಂತರ ಪರಿಶೀಲಿಸಿದಾಗ ಹುಂಡಿಗೆ ಚೆಕ್​ ಹಾಕಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥರೆಂದು ತಿಳಿದು ಬಂದಿತ್ತು.

ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಣೆ

ABOUT THE AUTHOR

...view details