ಗುಂಟೂರು(ಆಂಧ್ರಪ್ರದೇಶ) :ರಸ್ತೆ ಬದಿಯ ಪುನುಗುಲು(ಗೋಲಿಬಜೆ ಮಾದರಿಯ ಆಹಾರ) ತಿನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು 10 ವರ್ಷದ ಬಾಲಕ 16 ವರ್ಷದ ಬಾಲಕನಿಗೆ ಚಾಕುವಿನಿಂದ ಇರಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ.
ಗಾಯಾಳು ಬಾಲಕನನ್ನು ಈಗ ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
'ನಾನು ಭಿಕ್ಷುಕನಾ..?'
ಇಬ್ಬರು ಸ್ನೇಹಿತರು ರಸ್ತೆಯಲ್ಲಿ ಪುನುಗುಲು ತಿಂಡಿಯನ್ನು ತಿನ್ನುತ್ತಿದ್ದರು. ಈ ವೇಳೆ ಅಲ್ಲಿಗೆ 10 ವರ್ಷದ ಬಾಲಕ ಆಗಮಿಸಿದ್ದಾನೆ. ಆ ಇಬ್ಬರು ಸ್ನೇಹಿತರು ಅವನಿಗೆ ಪುನುಗುಲು ನೀಡಲು ಮುಂದಾಗಿದ್ದಾರೆ. ಈ ವೇಳೆ 'ನಾನು ಭಿಕ್ಷುಕನಾ..?' ಎಂದು 10 ವರ್ಷದ ಬಾಲಕ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ:COVID 3rd Wave: ಐಸಿಎಂಆರ್ನಿಂದ ಗುಡ್ ನ್ಯೂಸ್
ಈ ವೇಳೆ ವಾಗ್ವಾದ ನಡೆದು 16 ವರ್ಷದ ಬಾಲಕ 10 ವರ್ಷದ ಬಾಲಕನ ಕೆನ್ನೆಗೆ ಹೊಡೆದಿದ್ದಾನೆ. ಈ ವೇಳೆ ಮನೆಗೆ ತೆರಳಿದ ಬಾಲಕ, ಮನೆಯಿಂದ ಚಾಕು ತಂದು 16 ವರ್ಷದ ಬಾಲಕನಿಗೆ ಚುಚ್ಚಿ ಪರಾರಿಯಾಗಿದ್ದಾನೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 10 ವರ್ಷದ ಬಾಲಕನ ವಿರುದ್ಧ ದೂರು ದಾಖಲಾಗಿದೆ.