ಕರ್ನಾಟಕ

karnataka

ETV Bharat / bharat

ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮುಂಬೈನ 10 ವರ್ಷದ ಪೋರಿ!

ಈಕೆ ಇನ್ನೂ 10ರ ಹರೆಯದ ಬಾಲಕಿ. ಆಟವಾಡಿಕೊಂಡು ಬೆಳೆಯಬೇಕಾದ ವಯಸ್ಸಿನಲ್ಲಿ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್‌ ಎವರೆಸ್ಟ್‌ ಬೇಸ್‌ ಏರುವ ಮೂಲಕ ಅಮೋಘ ಸಾಧನೆ ಮಾಡಿದ್ದಾಳೆ.

Rhythm Mamania
ರಿದಂ ಮಮಾನಿಯಾ

By

Published : May 23, 2022, 10:48 AM IST

ಮುಂಬೈ(ಮಹಾರಾಷ್ಟ್ರ):ರಾಜ್ಯದ 10 ವರ್ಷದ ಬಾಲಕಿ ಚಾಂಪಿಯನ್ ಸ್ಕೇಟರ್ 'ರಿದಂ ಮಮಾನಿಯಾ' ಇತಿಹಾಸ ನಿರ್ಮಿಸಿದ್ದಾಳೆ. ಈಕೆ ಇದೀಗ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಏರಿದ 'ಮೊಟ್ಟಮೊದಲ ಅತ್ಯಂತ ಕಿರಿಯ ಭಾರತೀಯ ಪರ್ವತಾರೋಹಿ'. ಅದೂ ಕೂಡಾ ಯಾವುದೇ ವಿಶೇಷ ತರಬೇತಿಯನ್ನು ಪಡೆಯದೆ ಸತತ ಪ್ರಯತ್ನದ ಮೂಲಕ ಈ ಸಾಧನೆ ಮಾಡಿದ್ದಾಳೆ.

ಬಾಂದ್ರಾ ಋಷಿಕುಲ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿನಿ ರಿದಂ ಪ್ರತಿದಿನ ಕಡಿದಾದ ಮೆಟ್ಟಿಲುಗಳನ್ನು ಹತ್ತುವ ಮೂಲಕ ಅಭ್ಯಾಸ ಮಾಡುತ್ತಿದ್ದಳಂತೆ. ಸಮುದ್ರ ಮಟ್ಟದಿಂದ 5,364 ಮೀಟರ್ ಎತ್ತರದಲ್ಲಿ ಕಡಿಮೆ ಆಮ್ಲಜನಕದ ವಾತಾವರಣ ಈ ಪೋರಿಯ ಸಾಧನೆಗೆ ಅಡ್ಡಿಯಾಗಲಿಲ್ಲ. ಮೇ 6ರಂದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ತಮ್ಮ ಪೋಷಕರಾದ ಊರ್ಮಿ ಮತ್ತು ಹರ್ಷಲ್ ಜತೆಗೆ ಶೃಂಗದ ತುದಿ ತಲುಪಿದಳು.

'ಇಬಿಸಿ ಶೃಂಗ ತಲುಪುವುದು ನನ್ನ ಗುರಿಯಾಗಿತ್ತು. ಆದ್ದರಿಂದ ಚಳಿ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಪರೂಪದ ಆಲಿಕಲ್ಲು ಮಳೆ ನನಗೆ ಹೊಸದು. ಬೇಸ್ ಕ್ಯಾಂಪ್ 5,364 ಮೀಟರ್‌ನಲ್ಲಿದ್ದು, ನನ್ನ ಗುರಿಯನ್ನು ಪೂರ್ಣಗೊಳಿಸಲು 11 ದಿನಗಳು ಬೇಕಾಯಿತು' ಎಂದು ರಿದಂ ಉದ್ಗರಿಸಿದಳು.

'ರಿದಂ ರಾಷ್ಟ್ರಮಟ್ಟದ ಸ್ಕೇಟರ್. ಅವಳು ಪರ್ವತಾರೋಹಣ ಮಾಡುವುದನ್ನು ಇಷ್ಟಪಡುತ್ತಿದ್ದಳು. ಅವಳ ಮೊದಲ ಸುದೀರ್ಘ ಚಾರಣವು 21 ಕಿ.ಮೀ ದೂಧಸಾಗರ್ ಆಗಿತ್ತು ಮತ್ತು ಅಂದಿನಿಂದ ಆಕೆ ಮಾಹುಲಿ, ಸೊಂಡೈ, ಕರ್ನಾಲಾ ಮತ್ತು ಲೋಹಗಡ್‌ನಂತಹ ಸಹ್ಯಾದ್ರಿ ಶ್ರೇಣಿಗಳಲ್ಲಿ ಕೆಲವು ಶಿಖರಗಳನ್ನು ಏರಿದ್ದಾಳೆ. ಇಬಿಸಿ ತಲುಪಲು ಇತರರು ಹೆಲಿಕಾಪ್ಟರ್ ಆಯ್ಕೆ ಮಾಡಿಕೊಂಡರೆ ಆಕೆ ಪರ್ವತಾರೋಹಣವನ್ನೇ ಆಯ್ಕೆ ಮಾಡಿಕೊಂಡಳು' ಎಂದು ತಾಯಿ ಊರ್ಮಿ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕುತುಬ್ ಮಿನಾರ್ ಉತ್ಖನನಕ್ಕೆ ಸರ್ಕಾರ ಆದೇಶ ನೀಡಿಲ್ಲ: ಕೇಂದ್ರ ಸಚಿವ ಜಿ.ಕೆ.ರೆಡ್ಡಿ

ABOUT THE AUTHOR

...view details