ಬೆಟ್ಟಿಯಾ(ಬಿಹಾರ):ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಕಾರಣಕ್ಕೂ ಇನ್ನೊಬ್ಬರ ಜೀವ ತೆಗೆಯುವ ಘಟನೆಗಳು ನಡೆಯುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಇನ್ನೊಬ್ಬರ ಜಮೀನಿನ ರಸ್ತೆಯಲ್ಲಿ ನಡೆದುಕೊಂಡು ಹಾಲು ಹಾಕಲು ತೆರಳುತ್ತಿದ್ದಾಗ ಇಟ್ಟಿಗೆ ತುಂಡು ಗದ್ದೆಯಲ್ಲಿ ಬಿದ್ದಿದ್ದಕ್ಕಾಗಿ 10 ವರ್ಷದ ಬಾಲಕಿಯ ಕೊಲೆ ಮಾಡಲಾಗಿದೆ. ಬಿಹಾರದ ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾದಲ್ಲಿ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಬುಧವಾರ ಸಂಜೆ ಹಾಲು ಹಾಕಲು ನಡೆದುಕೊಂಡು ತೆರಳುತ್ತಿದ್ದಾಗ ಇನ್ನೊಬ್ಬರ ಹೊಲದಲ್ಲಿ ಇಟ್ಟಿಗೆ ತುಂಡು ಬಿದ್ದಿದೆಯಂತೆ. ಇದರಿಂದ ಕೋಪಗೊಂಡ ಜಮೀನಿನ ಮಹಿಳೆ ಬಾಲಕಿಯ ಎದೆಗೆ ಜೋರಾಗಿ ಒದ್ದಿದ್ದಾಳೆ. ಇದರಿಂದ ಮಗು ಮೂರ್ಛೆ ಹೋಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಇದನ್ನೂ ಓದಿ:'ತಂದೆ, ಚಿಕ್ಕಪ್ಪ ಸೇರಿ ಪ್ರತಿದಿನ 20-25 ಜನರಿಂದ ಅತ್ಯಾಚಾರ'! ಫೇಸ್ಬುಕ್ನಲ್ಲಿ ದುಷ್ಕೃತ್ಯ ವಿವರಿಸಿದ ಯುವತಿ!
ಮೃತ ಬಾಲಕಿಯನ್ನು ಸಚಿನ್ ಪ್ರಸಾದ್ ಎಂಬವರ ಪುತ್ರಿ ಸಾಕ್ಷಿರಾಣಿ ಎಂದು ಗುರುತಿಸಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿ ಮಹಿಳೆ ರಾಮಕಾಳಿದೇವಿಯನ್ನು ಹಿಡಿದು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಗುವಿನ ಮೇಲೆ ಹಲ್ಲೆ ಮಾಡಿಲ್ಲ ಎಂದು ಆಕೆ ಹೇಳಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಗೋಸ್ಕರ ಕಾಯಲಾಗುತ್ತಿದೆ. ಕುಟುಂಬಸ್ಥರ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ ಎಂದು ಎಸ್ಎಚ್ಒ ಉಗ್ರನಾಥ್ ತಿಳಿಸಿದ್ದಾರೆ.
ತಂದೆಯ ಆರೋಪ: ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಂದೆ ಮಾತನಾಡಿದ್ದು, ಕಳೆದ ಕೆಲ ದಿನಗಳ ಹಿಂದೆ ತಮ್ಮ ಮೇಕೆಯೊಂದು ರಾಮಕಾಳಿ ಹೊಲಕ್ಕೆ ಹೋಗಿತ್ತು. ಈ ವಿಚಾರವಾಗಿ ಜಗಳವಾಗಿದೆ. ಇದರ ಬೆನ್ನಲ್ಲೇ ಬುಧವಾರ ಸಂಜೆ ಮಗಳು ಹಾಲು ಹಾಕಲು ಹೋಗುತ್ತಿದ್ದಾಗ ಇಟ್ಟಿಗೆ ತುಂಡು ಅವರ ಜಮೀನಿನಲ್ಲಿ ಬಿದ್ದಿದೆ ಎಂದು ನನ್ನ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.