ಮುಂಬೈ:ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿನ್ನೆ ಸ್ಫೋಟಕ ಸಾಮಗ್ರಿ(ಜಿಲಿಟಿನ್ ಕಡ್ಡಿ) ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಇದೀಗ ಮುಂಬೈ ಕ್ರೈಂ ಬ್ರ್ಯಾಂಚ್ನಿಂದ ಇದರ ತನಿಖೆ ನಡೆಸಲು 10 ತಂಡಗಳ ರಚನೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇದೀಗ ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ತನಿಖೆ ನಡೆಸಲಿದ್ದು, ಅದಕ್ಕಾಗಿ 10 ತಂಡ ರಚನೆ ಮಾಡಲಾಗಿದೆ. ಮೊದಲ ತಂಡ ಪೆಡ್ಡರ್ ರಸ್ತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಕಲೆಹಾಕುವುದರಲ್ಲಿ ನಿರಂತವಾಗಿದೆ ಎಂದು ತಿಳಿದು ಬಂದಿದ್ದು, ಎರಡನೇ ತಂಡ ವಾಹನದ ಚಲನೆ ಪತ್ತೆಗಾಗಿ ಟ್ರಾಫಿಕ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾದ ಸಿಸಿಟಿವಿ ದೃಶ್ಯಾವಳಿ ಸ್ಕ್ಯಾನ್ ಮಾಡ್ತಿದೆ.
ಮೂರನೇ ತಂಡ ಪೊಲೀಸ್ ಪ್ರಧಾನ ಕಚೇರಿ ಹಾಗೂ ಕ್ರಾಫೋರ್ಡ್ ಮಾರುಕಟ್ಟೆ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಹಾಗೂ ನಾಲ್ಕನೇ ತಂಡ ಶಂಕಿತರ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಐದನೇ ತಂಡ ವಿಧಿ ವಿಜ್ಞಾನ ತಂಡಕ್ಕೆ ಸಹಾಯ ಮಾಡಲಿದ್ದು, ಆರನೇ ತಂಡ ಅಂಬಾನಿ ಕುಟುಂಬಕ್ಕೆ 2013ರಲ್ಲಿ ಭಾರತೀಯ ಮುಜಾಹಿದ್ದೀನ್ ನೀಡಿದ್ದ ಬೆದರಿಕೆಯ ಕೋನ ತನಿಖೆ ಮಾಡುತ್ತಿದೆ. ಉಳಿದ ತಂಡಗಳು ವಿವಿಧ ಪ್ರದೇಶಗಳಲ್ಲಿ ತನಿಖೆ ನಡೆಸುತ್ತಿವೆ.