ನವದೆಹಲಿ: ಅಗ್ನಿವೀರ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಮಾಜಿ ಅಗ್ನಿವೀರ್‌ಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ ಮತ್ತು ಮಾಜಿ ಅಗ್ನಿವೀರರು ಮೊದಲ ಬ್ಯಾಚ್ನವರಾ ಅಥವಾ ನಂತರದ ಬ್ಯಾಚ್ನವರಾ ಎಂಬುದನ್ನು ಆಧರಿಸಿ ಗರಿಷ್ಠ ವಯೋಮಿತಿ ನಿಯಮಗಳನ್ನು ಸಡಿಲಿಸಿದೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಆಕ್ಟ್, 1968 (1968 ರ 47) ಸೆಕ್ಷನ್ 141 ರ ಉಪ-ವಿಭಾಗ (2) ರ ಷರತ್ತುಗಳು (ಬಿ) ಮತ್ತು (ಸಿ) ಗಳ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೇಂದ್ರ ಗೃಹ ಸಚಿವಾಲಯವು (MHA) ಗುರುವಾರ ಹೊರಡಿಸಿದ ಅಧಿಸೂಚನೆ ಮೂಲಕ ಈ ಘೋಷಣೆ ಮಾಡಿದೆ.
ಪ್ರದತ್ತ ಅಧಿಕಾರಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) ನೇಮಕಾತಿ ನಿಯಮಗಳು, 2015, ಅಂದರೆ ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) (ತಿದ್ದುಪಡಿ) ನೇಮಕಾತಿ ನಿಯಮಗಳು, 2023 ಅನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.
ಕಾನ್ಸ್‌ಟೇಬಲ್ (ಸಾಮಾನ್ಯ ಕರ್ತವ್ಯ)/ರೈಫಲ್‌ಮ್ಯಾನ್ ಹುದ್ದೆಗೆ ನೇಮಕಾತಿಯಲ್ಲಿ ಮಾಜಿ ಅಗ್ನಿವೀರ್‌ಗಳಿಗೆ 10 ಪ್ರತಿಶತದಷ್ಟು ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಅಸ್ಸೋಂ ರೈಫಲ್ಸ್ಗಳ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮತ್ತು ದೈಹಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಳೆದ ತಿಂಗಳು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ (MoS) ನಿತ್ಯಾನಂದ ರೈ ಲೋಕಸಭೆಗೆ ಮಾಹಿತಿ ನೀಡಿದ್ದರು.