ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ಭಾರಿ ಮಳೆ: ಸಿಡಿಲು ಬಡಿದು 10 ಮಂದಿ ಸಾವು, ಮೂವರಿಗೆ ಗಾಯ

ಒಡಿಶಾ ರಾಜ್ಯದ ವಿವಿಧೆಡೆ ಸಿಡಿಲಬ್ಬರಕ್ಕೆ ಶನಿವಾರ ಒಂದೇ ದಿನ ಹತ್ತು ಮಂದಿ ಸಾವನ್ನಪ್ಪಿದ್ದಾರೆ.

lightning strikes
ಒಡಿಶಾದಲ್ಲಿ ಭಾರಿ ಮಳೆ

By ETV Bharat Karnataka Team

Published : Sep 3, 2023, 10:10 AM IST

ಭುವನೇಶ್ವರ (ಒಡಿಶಾ) :ಶನಿವಾರ ಸುರಿದ ಭಾರಿ ಮಳೆಗೆ ಒಡಿಶಾದ ಆರು ಜಿಲ್ಲೆಗಳಲ್ಲಿ ಸಿಡಿಲಾಘಾತಕ್ಕೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗಿರ್‌ನಲ್ಲಿ ಇಬ್ಬರು ಸೇರಿದಂತೆ ಅಂಗುಲ್, ಬೌಧ್, ಜಗತ್‌ಸಿಂಗ್‌ಪುರ ಮತ್ತು ಧೆಂಕನಾಲ್‌ ಎಂಬಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಖುರ್ದಾದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿ ಮಾಹಿತಿ ನೀಡಿದೆ.

ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿದಂತೆ ಒಡಿಶಾದ ಕರಾವಳಿ ಪ್ರದೇಶದಲ್ಲಿ ನಿನ್ನೆ ಗುಡುಗು, ಮಿಂಚುಸಹಿತ ಧಾರಾಕಾರ ಮಳೆ ಸುರಿದಿದೆ. ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.

ಸೈಕ್ಲೋನಿಕ್ ಪರಿಚಲನೆಯು ಮಾನ್ಸೂನ್ ಸಕ್ರಿಯಗೊಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಭುವನೇಶ್ವರ ಮತ್ತು ಕಟಕ್‌ನಲ್ಲಿ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 90 ನಿಮಿಷಗಳ ಕಾಲಾವಧಿಯಲ್ಲಿ 126 ಮಿ.ಮೀ ಮತ್ತು 95.8 ಮಿ.ಮೀ ಮಳೆಯಾಗಿದೆ.

ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದೆ. ಇದು ಸೆಪ್ಟೆಂಬರ್ 3ರ ಸುಮಾರಿಗೆ ಬಂಗಾಳ ಕೊಲ್ಲಿಯ ಉತ್ತರಕ್ಕೆ ಬರುವ ಸಾಧ್ಯತೆ ಇದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಹೆಚ್.ಆರ್.ಬಿಸ್ವಾಸ್ ಹೇಳಿದರು. ಹಾಗೆಯೇ, ಗುಡುಗುಸಹಿತ ಮಳೆಯಾಗುವ ವೇಳೆ ಜನರು ಅನಗತ್ಯ ಓಡಾಟ ಕಡಿಮೆ ಮಾಡಬೇಕು, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಇದನ್ನೂ ಓದಿ :ವರುಣಾರ್ಭಟಕ್ಕೆ ಹಿಮಾಚಲ ಪ್ರದೇಶ ತತ್ತರ..ಯೆಲ್ಲೋ ಅಲರ್ಟ್ ಘೋಷಣೆ : ಮೇಘ ಸ್ಫೋಟದಲ್ಲಿ ಸಿಲುಕಿದ್ದ 51 ಜನರ ರಕ್ಷಣೆ

ಯೆಲ್ಲೋ ಅಲರ್ಟ್​ ಘೋಷಣೆ: ಕಡಿಮೆ ಒತ್ತಡದ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 22 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ. ಇನ್ನೊಂದೆಡೆ, ಶನಿವಾರ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಭುವನೇಶ್ವರ ಜಲಾವೃತಗೊಂಡಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆ ಮೇಲೆ ಮೊಣಕಾಲೆತ್ತರದ ನೀರು ನಿಂತಿದ್ದು, ಸವಾರರು ಪರದಾಡುವಂತಾಗಿದೆ. (ಪಿಟಿಐ)

ಇದನ್ನೂ ಓದಿ :ನಾಳೆಯಿಂದ ರಾಜ್ಯದಲ್ಲಿ ಭಾರಿ ಮಳೆ: ದಕ್ಷಿಣ ಒಳನಾಡಿನ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಇನ್ನು ಕರ್ನಾಟಕ ರಾಜ್ಯದಲ್ಲಿಯೂ ಸಹ ನೈರುತ್ಯ ಮುಂಗಾರು ಸಕ್ರಿಯಗೊಂಡಿದೆ. ಹೀಗಾಗಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ :ತುಂಬೆ ಡ್ಯಾಂನಲ್ಲಿ ಕುಸಿದ ನೀರಿನ ಮಟ್ಟ : ಮಳೆ ಬಾರದಿದ್ದರೆ ಮಂಗಳೂರಿಗೆ ನೀರಿನ ಸಮಸ್ಯೆ

ABOUT THE AUTHOR

...view details