ಪಾಟ್ನಾ(ಬಿಹಾರ):ರಾಜಧಾನಿ ಪಾಟ್ನಾದಲ್ಲಿ ನಡೆಯುತ್ತಿರುವ ಬಿಹಾರ ಡೈರಿ ಮತ್ತು ಕ್ಯಾಟಲ್ ಎಕ್ಸ್‌ಪೋದಲ್ಲಿ ಮುರ್ರಾ ತಳಿಯ 'ಗೋಲು-2' ಎಂಬ ಹೆಸರಿನ 10 ಕೋಟಿ ರೂಪಾಯಿ ಮೌಲ್ಯದ ಕೋಣ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮೂರು ದಿನಗಳ ಎಕ್ಸ್‌ಪೋದಲ್ಲಿ 'ಗೋಲು-2' ಎಲ್ಲರ ಗಮನ ಸೆಳೆಯುತ್ತಿದೆ. ಆರು ವರ್ಷ ಪ್ರಾಯದ ಈ ಕೋಣ ತನ್ನ ತೂಕ ಮತ್ತು ಸದೃಢವಾದ ದೇಹಕ್ಕಾಗಿ ನೋಡುಗರನ್ನು ಹುಬ್ಬೇರಿಸುವಂತೆ ಮಾಡುತ್ತಿದೆ. ಭಾರಿ ಮೊತ್ತದ ಕೋಣ ಎಕ್ಸ್‌ಪೋಗೆ ಆಗಮಿಸಿದೆ ಎಂಬ ಸುದ್ದಿ ಗೊತ್ತಾಗಿದ್ದೇ ತಡ, ರಾಜ್ಯದ ವಿವಿಧೆಡೆಯಿಂದ ಬಂದ ಅಪಾರ ಸಂಖ್ಯೆಯ ಜನರು ಕೋಣವನ್ನು ಸುತ್ತುವರೆದು ಅದರ ವಿಶೇಷತೆ ಅರಿಯಲು ಮುಂದಾದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹರಿಯಾಣದ ಪಾಣಿಪತ್‌ನ ರೈತ ನರೇಂದ್ರ ಸಿಂಗ್ ಅವರು ಈ ಕೋಣದ ಜೊತೆಗೆ ಎಕ್ಸ್‌ಪೋಗೆ ಆಗಮಿಸಿದ್ದಾರೆ. ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಗರಿಮೆ ಹೊಂದಿರುವ ವಿಶೇಷ ಕೋಣವಿದು. ಇದಕ್ಕೆ ತಿಂಗಳಿಗೆ ಸುಮಾರು ಎಂಟು ಲಕ್ಷ ರೂಪಾಯಿ ಆದಾಯ ತಂದುಕೊಡಬಲ್ಲ ಸಾಮರ್ಥ್ಯವೂ ಇದಕ್ಕಿದೆ. ಆನೆಯಾಕಾರದ ಕೋಣ 15 ಕ್ವಿಂಟಾಲ್ ತೂಕ, ಸುಮಾರು ಐದೂವರೆ ಅಡಿ ಎತ್ತರ, 3 ಅಡಿ ಅಗಲವಿದೆ.
ಪ್ರತಿದಿನ 35 ಕೆ.ಜಿ ಒಣ ಮತ್ತು ಹಸಿರು ಮೇವನ್ನು ಇದು ತಿನ್ನುತ್ತದೆ. ಅವರೆಕಾಯಿ ಕೂಡ ಇದರ ಅಚ್ಚುಮುಚ್ಚಿನ ಆಹಾರ. ಇದರ ಹೊರತಾಗಿ, ಆಹಾರದಲ್ಲಿ ಏಳೆಂಟು ಕಿಲೋ ಬೆಲ್ಲವೂ ಸೇರಿಕೊಳ್ಳುತ್ತದೆ. ಕೆಲವೊಮ್ಮೆ ತುಪ್ಪ ಸವಿಯುವ ಅವಕಾಶವೂ ಈ ಕೋಣಕ್ಕೆ ಸಿಗುತ್ತದೆ. ಪ್ರತಿದಿನ ಕನಿಷ್ಠ 10 ಲೀಟರ್ ಹಾಲು ಸೇವಿಸುತ್ತದೆ. ಇದರ ಆಹಾರಕ್ಕೆ ತಿಂಗಳಿಗೆ ಸುಮಾರು 30 ರಿಂದ 35 ಸಾವಿರ ರೂ. ವ್ಯಯಿಸಲಾಗುತ್ತದೆ. ಆಹಾರ ಹೊರತಾಗಿ ಐಷಾರಾಮಿ ಜೀವನ ಇದರ ಇನ್ನೊಂದು ಭಾಗ. ಹವಾನಿಯಂತ್ರಿತ ಕೋಣೆ ಹೊಂದಿರುವ ಗೋಲು-2, ಎಲ್ಲಿಗೆ ಹೋದರೂ ತಂಪಾಗಿಡಲು ನೀರಿನ ಟ್ಯಾಂಕರ್ ಕೂಡ ಇರುತ್ತದೆ. ಇದಕ್ಕೆ ಪ್ರತಿದಿನ ಸಾಸಿವೆ ಎಣ್ಣೆಯ ಮಸಾಜ್ ನಡೆಯುತ್ತದೆ. ಪ್ರತಿದಿನ ಐದು ಕಿಲೋಮೀಟರ್ ನಡೆಯುವುದು ಇದರ ದಿನದ ಕಾಯಕ. ಹೀಗೆ ಹಲವು ಅಚ್ಚರಿದಾಯಕ ಸಂಗತಿಯನ್ನು ಈ ಕೋಣದ ಕುರಿತು ಮಾಲೀಕರು ಹೇಳಿದರು.