ಕರ್ನಾಟಕ

karnataka

ETV Bharat / bharat

ಜಾನುವಾರು ಮೇಳದ ಪ್ರದರ್ಶನದಲ್ಲಿ ಕಾಣಿಸಿಕೊಂಡ ಕೇಸರಿ ಕುದುರೆ: ವಿದೇಶಿಗನಿಂದ 10 ಕೋಟಿ ಆಫರ್!​ ಏನಿದರ ವಿಶೇಷತೆ? - etv bharat kannada

ರಾಜಸ್ಥಾನದಲ್ಲಿ ನಡೆಯುತ್ತಿರುವ ಪುಷ್ಕರ್ ಜಾನುವಾರು ಮೇಳದಲ್ಲಿ ಕುದುರೆಯೊಂದಕ್ಕೆ 10 ಕೋಟಿ ಆಫರ್​ ಬಂದಿದೆ.

ಕೇಸರಿ ಕುದುರೆ
ಕೇಸರಿ ಕುದುರೆ

By ETV Bharat Karnataka Team

Published : Nov 21, 2023, 9:08 PM IST

ಜಾಮ್​ನಗರ್(ಗುಜರಾತ್​):ರಾಜಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಪುಷ್ಕರ್​ ಜಾನುವಾರು ಮೇಳ ನಡೆಯುತ್ತಿದೆ. ಇದರಲ್ಲಿ ವಿವಿಧ ರಾಜ್ಯಗಳಿಂದ ತರಲಾದ ಪ್ರಾಣಿಗಳ ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿದೆ. ಇದೀಗ ಪ್ರದರ್ಶನಕ್ಕಿಟ್ಟಿರುವ ಗುಜರಾತ್‌ನ ಜಾಮ್‌ನಗರದ ಕುದುರೆಗೆ ಭಾರಿ ಬೇಡಿಕೆ ಬರಲಾರಂಭಿಸಿದೆ.

ಚರಂಜಿತ್ ಸಿಂಗ್ ಎನ್ನುವ ಕುದುರೆ ಪ್ರೇಮಿಯೊಬ್ಬರು ಕೇಸರಿಯಾ ಎಂಬ ಮಾರ್ವಾಡಿ ತಳಿಯ ಕುದುರೆಯೊಂದನ್ನು ಸಾಕಿದ್ದಾರೆ. ಪ್ರತಿವರ್ಷ ರಾಜಸ್ಥಾನದಲ್ಲಿ ನಡೆಯುವ ಪುಷ್ಕರ ಮೇಳದಲ್ಲಿ ಈ ಕುದುರೆಯನ್ನು ಪ್ರದರ್ಶನಕ್ಕಿಡಲಾಗುತ್ತದೆ. ಎತ್ತರ ಮತ್ತು ಸೌಂದರ್ಯಯುತವಾಗಿರುವ ಈ ಕುದುರೆ ಮೇಳದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದನ್ನು ನೋಡಲೆಂದೇ ದೂರದ ಊರಿನಿಂದ ಕುದುರೆ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಕೆಸರಿ ಬೆಲೆ ಕೂಡ ಹೆಚ್ಚಳವಾಗುತ್ತಲೆ ಇದೆ.

ಈ ಬಾರಿ ಮೇಳಕ್ಕೆ ಆಗಮಿಸಿದ ಫ್ರಾನ್ಸ್‌ನ ಪ್ಯಾರಿಸ್‌ ಮೂಲದ ವಿದೇಶಿ ಪ್ರವಾಸಿಯೊಬ್ಬರು ಪ್ರದರ್ಶನಕ್ಕಿಡಲಾಗಿದ್ದ ಕೇಸರಿಯಾ ಕುದುರೆಗೆ ಮನಸೋತು ಅದನ್ನು ಖರೀದಿಸಲು ಮುಂದಾಗಿದ್ದಾರೆ. ಅದರಂತೆ ಮಾಲೀಕನಿಗೆ 10 ಕೋಟಿ ರೂ.ಗಳ ​ ಆಫರ್​ ಕೂಡ ನೀಡಿದ್ದಾರೆ. ಆದರೆ ಕೇಸರಿ ಮಾಲೀಕ ಚರಂಜಿತ್ ಸಿಂಗ್ ಮಾತ್ರ ವಿದೇಶಿ ಪ್ರವಾಸಿಯ ಆಫರ್ ತಿರಸ್ಕರಿಸಿದ್ದಾರಂತೆ. ಅಲ್ಲದೇ ತಾನು ಸಾಕಿದ ಕುದುರೆ ತನ್ನ ಪಾಲಿನ ದೇವರು ಇದ್ದಂತೆ ಎಂದು ತನಗೆ ಬಂದ ಆಫರ್​ ಕೈಬಿಟ್ಟಿದ್ದಾರೆಂದು ವರದಿಯಾಗಿದೆ.

ಕೇಸರಿ ದಿನನಿತ್ಯದ ಆಹಾರ:ಈ ಕುದುರೆಗೆ ದಿನಕ್ಕೆ ಮೂರು ಬಾರಿ 5 ಲೀಟರ್ ಶುದ್ಧ ದೇಸಿ ಹಸುವಿನ ಹಾಲನ್ನು ಕುಡಿಸಲಾಗುತ್ತದೆ. ಜತೆಗೆ ಕಡಲೆಕಾಯಿ ಮತ್ತು ಕಾಳುಗಳನ್ನು ಸಹ ನೀಡಲಾಗುತ್ತದೆ. ಅಲ್ಲದೇ ಇದಕ್ಕೆ ಕುಡಿಯಲು ಬಿಸ್ಲೇರಿ ನೀರು ಕೊಡಲಾಗುತ್ತದೆ. ಪ್ರತಿ ದಿನ ತಪಾಸಣೆ ಕೂಡ ಮಾಡಲಾಗುತ್ತದೆ ಎಂದು ಮಾಲೀಕ ಹೇಳಿದ್ದಾನೆ.

ಈ ಕುದುರೆ ವಿಶೇಷತೆ ಏನು?ಕೇಸರಿ ಕುದುರೆ ಮಾರ್ವಾಡಿ ತಳಿಯದ್ದಾಗಿದೆ. ಈ ರೀತಿಯ ಕುದುರೆ ಹೆಚ್ಚಾಗಿ ಪಶ್ಚಿಮ ರಾಜಸ್ಥಾನದ ಮಾರ್ವಾರ್ ಎಂಬ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ರಾಜರ ಕಾಲದಲ್ಲಿ ಈ ಮಾರ್ವಾಡಿ ಕುದುರೆಗಳನ್ನು ಹೆಚ್ಚಾಗಿ ಯುದ್ಧಗಳ ಸಮಯದಲ್ಲಿ ಬಳಸಲಾಗುತ್ತಿತ್ತು. ಮಾರ್ವಾಡಿ ಕುದುರೆಗಳ ಮತ್ತೊಂದು ವಿಶೇಷತೆಯೆಂದರೆ ಇವು ಸಾಮಾನ್ಯ ಕುದುರೆಗಳಿಗಿಂತ ವೇಗವಾಗಿ ಓಡುತ್ತವೆ. ಮರುಭೂಮಿ ಪ್ರದೇಶದಲ್ಲೂ ಇವು ಸುಲಭವಾಗಿ ಚಲಿಸುತ್ತವಂತೆ.

ಕುದುರೆ ಮಾಲೀಕ ಚರಂಜಿತ್ ಸಿಂಗ್ ಗುಜರಾತ್‌ನ ಜಾಮ್‌ನಗರದ ಲೋಥಿಯಾ ಗ್ರಾಮದ ನಿವಾಸಿಯಾಗಿದ್ದಾರೆ. ಇವರಿಗೆ ಕುದುರೆಗಳು ಎಂದರೆ ಪಂಚಪ್ರಾಣ. ಹೀಗಾಗಿ ಕುದುರೆಗಳಿಗಾಗಿಯೇ ವಿಶೇಷವಾದ ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ದಾರೆ. ಚರಣ್​ಜಿತ್​ ಸಿಂಗ್ ಕೇಸರಿ ಸೇರಿದಂತೆ ಸುಮಾರು 12 ಕುದುರೆಗಳನ್ನು ಹೊಂದಿದ್ದಾರೆ. ಅವರು ಕಳೆದ 12 ವರ್ಷಗಳಿಂದ ಕುದುರೆಗಳನ್ನು ಸಾಕುತ್ತಿದ್ದು, ಕೇಸರಿ ತನ್ನ ಸೌಂದರ್ಯದಿಂದಲೇ ಸುದ್ದಿಯಾಗಿದೆ ಎನ್ನುತ್ತಾರೆ ಚರಣ್​​ಜಿತ್​ ಸಿಂಗ್.

ಪುಷ್ಕರ್​ ಜಾತ್ರೆ:ರಾಜಸ್ಥಾನದ ಪುಷ್ಕರ್ ಜಾನುವಾರು ಮೇಳದಲ್ಲಿ ಪ್ರಾಣಿಗಳ ವ್ಯಾಪಾರ ಜೋರಾಗಿ ನಡೆಯುತ್ತದೆ. ಜನರು ಈ ಮೇಳಕ್ಕೆ ಕುದುರೆ, ಹಸು, ಎತ್ತು ಮತ್ತು ಒಂಟೆ ಸೇರಿದಂತೆ ಇತರ ಪ್ರಾಣಿಗಳೊಂದಿಗೆ ಮಾರಾಟ ಮತ್ತು ಖರೀದಿಗೆಂದು ಆಗಮಿಸುತ್ತಾರೆ. ಕೇವಲ ದೇಶ ಮಾತ್ರವಲ್ಲದೇ ಫ್ರಾನ್ಸ್, ಅಮೆರಿಕ, ಲಂಡನ್ ಸೇರಿದಂತೆ ಬೇರೆ ಬೇರೆ ದೇಶಗಳಿಂದಲೂ ಸಾಕಷ್ಟು ಜನರು ಪುಷ್ಕರ ಜಾತ್ರೆಗೆ ಆಗಮಿಸುತ್ತಾರೆ. ಈ ಮೇಳದಲ್ಲಿ ಪ್ರತಿ ವರ್ಷವೂ ಕುದುರೆ ರೇಸ್ ಆಯೋಜಿಸಲಾಗುತ್ತದೆ.

ಇದನ್ನೂ ಓದಿ:ರಾಮನಗರ: ಮೂರು ಕರುಗಳಿಗೆ ಜನ್ಮ ನೀಡಿದ ಹಸು

ABOUT THE AUTHOR

...view details