ಮುಂಬೈ: ಚಿನ್ನದ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ನಾಲ್ವರು ಅಲ್ಲಿಂದ ಚಿನ್ನ ಮತ್ತು ಪ್ಲಾಟಿನಂ ಹಾಗೂ ಬೆಳ್ಳಿಯನ್ನು ಲಪಾಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಸುಮಾರು 2 ಕೆಜಿ 700 ಗ್ರಾಂನಷ್ಟು ಚಿನ್ನ ಮತ್ತು ಪ್ಲಾಟಿನಂ ಹಾಗೂ 2.5 ಕೆಜಿ ಬೆಳ್ಳಿಯ ಬಿಸ್ಕೆಟ್ ಅನ್ನು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಎಗರಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಚಿನ್ನ, ಪ್ಲಾಟಿನಂ ಸೇರಿದಂತೆ ಬೆಳ್ಳಿ ಕಳವು ಆಗುತ್ತಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಈ ಕುರಿತು ಮುಂಬೈನ ವನರೈ ಪೊಲೀಸರು ತನಿಖೆಗೆ ಮುಂದಾಗಿದ್ದರು. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್, ಮ್ಯಾನೇಜರ್ ಸೇರಿದಂತೆ ನಾಲ್ವರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಹುಲ್ ಠಾಕೂರ್ (26), ನಿಕೇಶ್ ಮಿಶ್ರಾ (33), ಅವಿನಾಶ್ ಬಹದ್ಧೂರ್ (27 ಮತ್ತು ಹರಿಪ್ರಸಾದ್ ತಿವಾರಿ (27) ಬಂಧಿತ ಆರೋಪಿಗಳು.
ಏನಿದು ಪ್ರಕರಣ?:ಮುಂಬೈನ ಕಾಮಾ ಆಭರಣ ಫ್ಯಾಕ್ಟರಿಯಲ್ಲಿ ಮೌಲ್ಯಯುತ ಚಿನ್ನ, ಪ್ಲಾಟಿನಂ ಮತ್ತು ಬೆಳ್ಳಿ ನಾಪತ್ತೆಯಾಗುತ್ತಿರುವ ಸಂಬಂಧ ವಾನರೈ ಪೊಲೀಸರು ಮಾಹಿತಿ ಪಡೆದಿದ್ದರು. ಈ ಮಾಹಿತಿ ಅನುಸಾರ ತನಿಖೆಗೆ ಮಂದಾದ ಪೊಲೀಸರು ಈ ಪ್ರಕರಣವನ್ನು ಅಪರಾಧ ತನಿಖಾ ದಳದ ಎರಡು ತಂಡದ ಅಡಿ ಭೇದಿಸಲು ಮುಂದಾದರು. ಪೊಲೀಸ್ ಇನ್ಸ್ಪೆಕ್ಟರ್ ರಾಣಿ ಪುರಿ, ಸಂಜಯ್ ಚೌಧರ್ಮ ಪಾಲ್ವೆ ಸೇರಿದಂತೆ ಇತರ ಅಧಿಕಾರಿಗಳು 24 ಗಂಟೆ ಅವಧಿಯಲ್ಲಿ ಈ ಪ್ರಕರಣವನ್ನು ಭೇಧಿಸಿದ್ದು, ನಾಲ್ವರನ್ನು ಬಂಧಿಸಿ, ಅವರ ಬಳಿ ಇದ್ದ 1 ಕೋಟಿ 56 ಲಕ್ಷದ ಮೌಲ್ಯದ ವಸ್ತುಗಳನ್ನು ಪಡೆದಿದ್ದಾರೆ.
ಕಾಮಾ ಫ್ಯಾಕ್ಟರಿಯಲ್ಲಿ ಒಟ್ಟು 400 ಜನರು ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲ ಫ್ಯಾಕ್ಟರಿ ಒಳಗೆ ಮತ್ತು ಹೊರಗೆ ಹೋಗುವಾಗ ಸೆಕ್ಯೂರಿಟಿ ಗಾರ್ಡ್ ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಾರೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ನನ್ನು ಈ ಕಳ್ಳತನದಲ್ಲಿ ಭಾಗಿಯಾಗಿಸಿಕೊಂಡ ಈ ಮೂವರು ಫ್ಯಾಕ್ಟರಿಯಿಂದ ಸುಲಭವಾಗಿ ಚಿನ್ನ, ಪ್ಲಾಟಿನಂ, ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ಕೃತ್ಯವನ್ನು ಇವರು ನಡೆಸಿದ್ದು, ಇದನ್ನು ಯಾರಿಗೆ ತಿಳಿಯದಂತೆ ಕಾಪಾಡಿಕೊಂಡಿದ್ದರು.