ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರರಿಗೆ ಟಿಕೆಟ್ ಕೇಳಿಲ್ಲ, ಅಂತಹ ರಾಜಕಾರಣಿಯೂ ಅವರಲ್ಲ. ಯಡಿಯೂರಪ್ಪನವರ ಪುತ್ರ ಎಂಬ ಕಾರಣಕ್ಕೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ಹೇಳುತ್ತಿರುವುದು ನೋವಿನ ಸಂಗತಿ ಎಂದು ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು.
ನವದೆಹಲಿಯಲ್ಲಿಂದು ಮಾತನಾಡಿದ ಅವರು, ಸಮರ್ಥರನ್ನು ಗುರುತಿಸಿ ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್ ಕೆಲಸ. ಆ ಕೆಲಸವನ್ನು ಹೈಕಮಾಂಡ್ ಬಹಳ ಅಚ್ಚುಕಟ್ಟಾಗಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಎಂಬ ಕಾರಣಕ್ಕೆ ನನಗೆ ಟಿಕೆಟ್ ಕೊಟ್ಟಿಲ್ಲ. ನನಗೆ ಟಿಕೆಟ್ ನೀಡಿದ್ದು ನಮ್ಮ ಹೈಕಮಾಂಡ್. ಕಳೆದ 10 ವರ್ಷಗಳಿಂದ ಬಿಜೆಪಿಯ ಭಾಗವಾಗಿದ್ದೇನೆ. ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದೇನೆ. ಪಕ್ಷ ಇದನ್ನು ಗುರುತಿಸಿದೆ. ಯಡಿಯೂರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಯಾರೇ ಆಗಲೀ ಕುಟುಂಬದ ಸದಸ್ಯರು ಸ್ವಂತವಾಗಿ ಬೆಳೆಯಬೇಕೆಂಬುವುದು ನಮ್ಮ ತಂದೆಯವರ ಉದ್ದೇಶ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಶ್ಲಾಘಿಸಿದ ವಿಜಯೇಂದ್ರ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ರಾಜ್ಯ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಯಡಿಯೂರಪ್ಪ ಮತ್ತು ಇತರ ಹಿರಿಯ ನಾಯಕರಿಂದ ಬಿಜೆಪಿ ಇಂದು ಕರ್ನಾಟಕದ ಮೂಲೆ ಮೂಲೆ ತಲುಪಿದೆ. ರಾಜ್ಯದ ಜನ ಕೂಡ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ರಾಜ್ಯಕ್ಕೆ ಮೋದಿಯವರ ನಾಯಕತ್ವ ಮತ್ತು ಡಬಲ್ ಇಂಜಿನ್ ಸರ್ಕಾರ ಉತ್ತಮ ಆಡಳಿತ ಕೊಟ್ಟಿದೆ ಎಂದರು.
ನನ್ನ ತಂದೆ 40 ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಸ್ಪರ್ಧಿಸಿರುವುದು ನನ್ನ ಪುಣ್ಯ. ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರದಿಂದ ಸ್ಪರ್ಧಿಸುವುದು ನನ್ನ ಕನಸು. ಇದಕ್ಕಾಗಿ ಹೈಕಮಾಂಡ್ಗೆ ಅಭಿನಂದನೆ ಸಲ್ಲಿಸಿದರು. 2021ರಲ್ಲಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಯಡಿಯೂರಪ್ಪನವರ ನಿರ್ಧಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಅಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವುದು ಯಡಿಯೂರಪ್ಪನವರ ಆಯ್ಕೆಯಾಗಿತ್ತು. ಮುಕ್ತ ಮನಸ್ಸಿನಂದ ಆ ಕೆಲಸವನ್ನು ಅವರು ಮಾಡಿದ್ದಾರೆ. ಆದರೆ, ವಿರೋಧ ಪಕ್ಷದವರು ಮಾತ್ರ ಯಡಿಯೂರಪ್ಪನವರಿಗೆ ಹೈಕಮಾಂಡ್ ದ್ರೋಹ ಬಗೆಯಿತು ಎಂದೆಲ್ಲ ಹೇಳುತ್ತಿದ್ದಾರೆ. ಆದರೆ, ಅದು ಸತ್ಯಕ್ಕೆ ದೂರವಾದ ಮಾತು ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ: ಬಿಜೆಪಿಗೆ ಗುಡ್ ಬೈ ಹೇಳಿದ ಲಕ್ಷ್ಮಣ ಸವದಿ