ಕಾರವಾರ:ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಚುನಾವಣಾ ಬಿಸಿ ದಿನದಿಂದ ದಿನಕ್ಕೆ ಏರತೋಡಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವುದು ಅಚ್ಚರಿ ವಿಷಯವೇನಲ್ಲ. ಆದರೆ, ಕಣದಲ್ಲಿರುವ ಅಭ್ಯರ್ಥಿಗಳು ಮಾತ್ರ ಅದಲು ಬದಲಾಗಿರುವುದು ಸದ್ಯ ಕ್ಷೇತ್ರದ ವೈಶಿಷ್ಟ್ಯವಾಗಿದೆ. ಇದರ ನಡುವೆ ಜೆಡಿಎಸ್ ಪಾತ್ರವೂ ಮರೆಯುವು.ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಎಷ್ಟರ ಮಟ್ಟಕ್ಕೆ ಮತದಾರರನ್ನು ಸೆಳೆಯುತ್ತದೆ ಅನ್ನೋದನ್ನು ಕಾದು ನೋಡಬೇಕು.
ಸದ್ಯ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ವಿ.ಎಸ್. ಪಾಟೀಲ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಬಿಜೆಪಿಯಲ್ಲಿ ಬಹುತೇಕ ಶಿವರಾಮ್ ಹೆಬ್ಬಾರ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ಕಾರಣದಿಂದ ಎರಡು ಪಕ್ಷಗಳು ತಂತ್ರ ಪ್ರತಿತಂತ್ರಗಳ ಮೂಲಕ ಗೆಲುವಿನ ಲೆಕ್ಕಾಚಾರಕ್ಕೆ ಇಳಿದಿವೆ.
ಕ್ಷೇತ್ರದ ವೈಶಿಷ್ಟ್ಯ:ಕಿತ್ತೂರು-ಕರ್ನಾಟಕ ಪ್ರದೇಶದದಲ್ಲಿರುವ ಈ ಕ್ಷೇತ್ರವು 2008ರಲ್ಲಿ ಉದಯಿಸಿತು. 2008ರ ಕ್ಷೇತ್ರ ಪುನರ್ ವಿಂಗಡಣೆ ಪ್ರಕಾರ ಇದು ಯಲ್ಲಾಪುರ, ಯಲ್ಲಾಪುರ ತಾಲೂಕು, ಮುಂಡಗೋಡ ತಾಲೂಕು, ಶಿರಸಿ ತಾಲೂಕು (ಭಾಗ), ಬನವಾಸಿ ಸೇರಿದಂತೆ ಹಲವು ನಗರಗಳನ್ನು ಒಳಗೊಂಡಿದೆ. 2019ರಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,72,394 ಮತದಾರರಿದ್ದರು. ಅದರಲ್ಲಿ ಒಟ್ಟು ಮಾನ್ಯ ಮತಗಳ ಸಂಖ್ಯೆ 1,32,139. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅರಬೈಲ್ ಹೆಬ್ಬಾರ್ ಶಿವರಾಮ್ ಅವರು 31408 ಮತಗಳ ಅಂತರದಿಂದ ಗೆದ್ದು ಈ ಕ್ಷೇತ್ರದಿಂದ ಶಾಸಕರಾದರು. ಅವರು ಒಟ್ಟು 80,442 ಮತಗಳನ್ನು ಪಡೆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಒಟ್ಟು 49,034 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಜೋರಾದ ಪ್ರಚಾರ ಭರಾಟೆ: ಬಿಜೆಪಿಯಲ್ಲಿದ್ದು ಉಪಚುನಾವಣೆ ವೇಳೆ ಹೆಬ್ಬಾರ್ ಸ್ಪರ್ಧೆಗೆ ಸಹಕಾರ ನೀಡಿದ್ದ ವಿ.ಎಸ್ ಪಾಟೀಲ್ ಅವರಿಗೆ ನೀಡಿದ್ದ ಎನ್ಡಬ್ಲ್ಯೂಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನವನ್ನು ಎರಡೇ ವರ್ಷಕ್ಕೆ ವಾಪಸ್ ಪಡೆಯಲಾಗಿದೆ. ಅಲ್ಲದೆ ಬಿಜೆಪಿಯಲ್ಲಿ ಕಡೆಗಣನೆ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸೇರಿರುವ ವಿಎಸ್ ಪಾಟೀಲ್, ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕೂಡ ಕೈಗೊಂಡಿದ್ದು ಬೂತ್ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅತೃಪ್ತರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಬಿಜೆಪಿಗರ ಸಂಪರ್ಕ ಸಾಧಿಸುತ್ತಿದ್ದು ಅಸಮಾಧಾನಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಇನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕೂಡ ಕ್ಷೇತ್ರದಲ್ಲಿ ತಾವು ಮಾಡಿದಂತಹ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಪರ ಕಾರ್ಯ ಮುಂದಿಟ್ಟುಕೊಂಡು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಆದರೆ, ಮೂಲ ಬಿಜೆಪಿಗರ ಕಡೆಗಣನೆ ಆರೋಪ ಇದ್ದು ಇದು ಹೆಬ್ಬಾರ್ಗೆ ಗೆಲುವಿಗೆ ಕಂಠಕವಾಗುವ ಸಾಧ್ಯತೆ ಇದೆ.
ಅಭ್ಯರ್ಥಿಗಳು ಅದಲು ಬದಲು:ಈ ಹಿಂದೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಇದೀಗ ಕಾಂಗ್ರೆಸ್ ಪಕ್ಷದ ಹುರಿಯಾಳು. ಅಲ್ಲದೇ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಸಚಿವ ಶಿವರಾಮ್ ಹೆಬ್ಬಾರ್, ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಯಗಳಿಸಿದ್ದಲ್ಲದೇ ಸಚಿವರೂ ಆಗಿದ್ದಾರೆ. ಈ ಬಾರಿಯೂ ಅವರು ಬಿಜೆಪಿಯಿಂದ ಕಣಕ್ಕಿಳಿಯುವುದು ಸಂಭವ. ಅಭ್ಯರ್ಥಿಗಳು ಅವರೇ ಆಗಿದ್ದರೂ ಪಕ್ಷಗಳು ಮಾತ್ರ ಅದಲು ಬದಲಾಗಿದ್ದು ಇಬ್ಬರೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ.