ಕಳೆದ ಏಳು ದಶಕಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಪುರುಷರ ಪ್ರಾಬಲ್ಯವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಪ್ರತಿ 1000 ಪುರುಷರಿಗೆ 973 ಮಹಿಳೆಯರ ಸರಾಸರಿ ಲಿಂಗ ಅನುಪಾತ ಹೊಂದಿದೆ. ಆದರೆ, ರಾಜ್ಯದ ಚುನಾವಣೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ, ಅಭ್ಯರ್ಥಿಗಳು ಮತ್ತು ಮತ ಚಲಾವಣೆ ಸೇರಿದಂತೆ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಬೆಳವಣಿಗೆ ಕಂಡರೂ ಕೂಡ ಮಂತ್ರಿಗಳಾಗಿ ಅಧಿಕಾರದಲ್ಲಿರುವವರ ಸಂಖ್ಯೆ ಮಾತ್ರ ಆತಂಕಕಾರಿಯಾಗಿ ಕುಸಿತ ಕಂಡಿದೆ.
ಭಾರತ ಚುನಾವಣಾ ಆಯೋಗ ನೀಡಿದ ಅಂಕಿಅಂಶಗಳ ಪ್ರಕಾರ, 1952 ರಿಂದ 2018 ರವರೆಗಿನ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯು ಭಾರಿ ಕಡಿಮೆ ಇದೆ. 1952 ರಲ್ಲಿ ಕೇವಲ ನಾಲ್ಕು ಮಹಿಳೆಯರು ಮಾತ್ರ ವಿಧಾನಸಬೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ಅವರಲ್ಲಿ ಮೂವರು ಚುನಾಯಿತರಾಗಿದ್ದರು. ಆದ್ರೆ, ತದನಂತರದ ಕೆಲವು ವರ್ಷಗಳಲ್ಲಿ ಸಣ್ಣ ಏರಿಳಿತಗಳೊಂದಿಗೆ ಮಹಿಳಾ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಿರುವಾಗ, ಅವರಲ್ಲಿ ಚುನಾಯಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. 1957 ರ ಚುನಾವಣೆಯಲ್ಲಿ ಮಹಿಳೆಯರ ಅಧಿಕಾರ ಸ್ವೀಕಾರ ದರವು 54% ರಿಂದ ಕ್ರಮೇಣ ಕೆಳಗಿಳಿಯಿತು. ನಂತರ 1962 ಮತ್ತು 1967 ರ ಚುನಾವಣೆಗಳಲ್ಲಿ 60% ನೊಂದಿಗೆ ಸ್ವಲ್ಪ ಸುಧಾರಣೆಯಾಯಿತು. 1972 ರ ಚುನಾವಣೆಗಳಲ್ಲಿ ಶೇ 35 ಕ್ಕೆ ಇಳಿಮುಖವಾಯಿತು. 1978 ರ ಚುನಾವಣೆಗಳಲ್ಲಿ ಮತ್ತಷ್ಟು ಕುಸಿತ ಕಂಡು 25% ಕ್ಕೆ ತಲುಪಿತು. ಆ ನಂತರ, 2018 ರ ಹೊತ್ತಿಗೆ ಸ್ವೀಕಾರ ದರವು 3.62% ಇದ್ದು, ಇನ್ನಷ್ಟು ದುರ್ಬಲಗೊಂಡಿರುವುದನ್ನು ನೋಡಬಹುದು. ರಾಜ್ಯದಲ್ಲಿ 221 ಮಹಿಳಾ ಸ್ಪರ್ಧಿಗಳಲ್ಲಿ ಕೇವಲ 8 ಮಂದಿ ಮಾತ್ರ ಅಧಿಕಾರಕ್ಕೆ ಬರುತ್ತಾರೆ.
ಇದನ್ನೂ ಓದಿ :ರಾಜ್ಯ ಚುನಾವಣೆಗೆ ಅಖಾಡ ಸಜ್ಜು: ಅಭ್ಯರ್ಥಿಗಳ ವೆಚ್ಚದ ಮೇಲೆ ಆಯೋಗದ ಹದ್ದಿನ ಕಣ್ಣು