ಮಂಡ್ಯ:ಜೆಡಿಎಸ್ ಭದ್ರಕೋಟೆ ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಕಮಲ್ ಮಾಡುವ ಮೂಲಕ ಕಮಲ ಅರಳಿಸಿದ್ದರು. ಇದೀಗ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಕೆ.ಆರ್.ಪೇಟೆಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶದಲ್ಲಿ ಭಾಗಿಯಾದ ಬಿ.ವೈ.ವಿಜಯೇಂದ್ರ ಅವರಿಗೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಲಾಯಿತು. ಜೆಸಿಬಿ ಮೂಲಕ ಹೂವಿನ ಮಳೆಗರೆದು ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಖಾಸಗಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು. ಸಚಿವ ನಾರಾಯಣ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಡಾ.ಇಂದ್ರೇಶ್, ಮೂಡ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇತರರು ಭಾಗಿಯಾಗಿದ್ದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಪಕ್ಷವು ಶಿಕಾರಿಪುರಕ್ಕೆ ನನ್ನನ್ನು ಅಭ್ಯರ್ಥಿ ಮಾಡಿದ್ದಕ್ಕೆ ಸಂತೋಷ ಆಗ್ತಿದೆ. ಕೆ.ಆರ್.ಪೇಟೆಗೆ ನಾರಾಯಣಗೌಡರನ್ನು ಅಭ್ಯರ್ಥಿ ಮಾಡಿದೆ. ನನ್ನ ಜೀವನದಲ್ಲಿ ಮೊದಲ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿದ್ದೇನೆ. ನನ್ನ ಮೊದಲ ಚುನಾವಣಾ ಪ್ರಚಾರ ನಾರಾಯಣ ಗೌಡರ ಪರ, ಕೆ.ಆರ್.ಪೇಟೆ ಕ್ಷೇತ್ರದಿಂದ ಮಾಡ್ತಿದ್ದೇನೆ. ಮೇ 10ಕ್ಕೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಧೀಮಂತ ವ್ಯಕ್ತಿ ನಾರಾಯಣಗೌಡರು. ಕಳೆದ ಉಪ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಗೆದ್ದರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಹುಲ್ಲು ಬೆಳೆಯಲ್ಲ ಅಂತಿದ್ರು. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡರನ್ನು ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿದ್ದು ನೀವು ಎಂದು ಹೇಳಿದರು.