ಬೆಂಗಳೂರು:ಮೈಸೂರಿನ ವರುಣಾ ಕ್ಷೇತ್ರದಿಂದ ನನ್ನ ಪುತ್ರ ಸ್ಪರ್ಧೆ ಮಾಡುವುದಿಲ್ಲ, ಈವರೆಗೂ ತಾವು ಪ್ರತಿನಿಧಿಸಿಕೊಂಡು ಬಂದಿರುವ ಶಿಕಾರಿಪುರ ಕ್ಷೇತ್ರದಿಂದಲೇ ತಮ್ಮ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಗೆ ವಿಜಯೇಂದ್ರ ನಿಲ್ಲಬೇಕು ಅಂತ ಬಹಳ ಒತ್ತಡ ಇದೆ. ವರುಣಾದಲ್ಲಿ ಒತ್ತಡ ಇದ್ದರೂ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಬೇಕು ಅಂತ ನಾನು ಈ ಹಿಂದೆಯೇ ಹೇಳಿದ್ದೇನೆ. ಹಾಗಾಗಿ ವರುಣಾದಲ್ಲಿ ವಿಜಯೇಂದ್ರ ಯಾವುದೇ ಕಾರಣಕ್ಕೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಶಿಕಾರಿಪುರದಲ್ಲೇ ಚುನಾವಣೆಗೆ ನಿಲ್ಲುವಂತೆ ನಾನು ವಿಜಯೇಂದ್ರಗೆ ಹೇಳಿದ್ದೇನೆ. ವಿಜಯೇಂದ್ರ ವರುಣಾದಲ್ಲಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ, ಶಿಕಾರಿಪುರದಲ್ಲೇ ಸ್ಪರ್ಧೆ ಮಾಡುತ್ತಾರೆ. ಹೈಕಮಾಂಡ್ ನಾಯಕರಿಗೂ ವಿಜಯೇಂದ್ರಗೆ ಶಿಕಾರಿಪುರದಿಂದಲೇ ಟಿಕೆಟ್ ನೀಡಿ ಅಂತ ತಿಳಿಸುತ್ತೇನೆ ಎಂದರು.
ಈ ಹಿಂದೆ ವಿಜಯೇಂದ್ರ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಗೊಂದಲ ಕಳೆದ ಹಲವಾರು ದಿನಗಳಿಂದ ಇತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದು ಅವರ ವಿರುದ್ಧ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ನಡುವೆ ಇಂದು ವಿಜಯೇಂದ್ರ ಕ್ಷೇತ್ರದ ಬಗ್ಗೆ ಇದ್ದ ಗೊಂದಲಕ್ಕೆ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ವರುಣಾಗೆ ವಿಜಯೇಂದ್ರ ಹೋಗಲ್ಲ, ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.