ಕರ್ನಾಟಕ

karnataka

ETV Bharat / assembly-elections

ವಿಜಯಪುರ ನಗರ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿ, ಕಾಂಗ್ರೆಸ್‌ನಲ್ಲಿ ಪೈಪೋಟಿ; ಜೆಡಿಎಸ್‌ನಿಂದ ಕಾದು ನೋಡುವ ತಂತ್ರ

ವಿಜಯಪುರ ನಗರ ಕ್ಷೇತ್ರಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಎಲ್ಲ ಪಕ್ಷಗಳಲ್ಲಿ ಟಿಕೆಟ್​ ಆಕಾಂಕ್ಷಿತರು ಹೆಚ್ಚಿದ್ದಾರೆ.

By

Published : Apr 4, 2023, 8:18 PM IST

Bijapur City Assembly Constituency Profile
Bijapur City Assembly Constituency Profile

ವಿಜಯಪುರ:ರಾಜ್ಯದ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯಪುರ ನಗರವೂ ಒಂದು. ಐತಿಹಾಸಿಕ ಸ್ಮಾರಕಗಳ ನಗರದ ಕದನ ಕಣವೇ ಬಲು ರೋಚಕ. ರಾಜ್ಯದಲ್ಲಿ ಬೇರೆ ಬೇರೆ ಕಾರಣದಿಂದಾಗಿ ಚುನಾವಣೆ ನಡೆದರೆ, ಇಲ್ಲಿ ಮಾತ್ರ ವಿಭಿನ್ನ ರಾಜಕಾರಣ ನಡೆಯುತ್ತಿರುತ್ತದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರಿಂದಾಗಿ ಈ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿರುತ್ತದೆ.

ಬಸನಗೌಡ ಪಾಟೀಲ್ ಯತ್ನಾಳ್​

ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಯತ್ನಾಳ್, 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸುಮಾರು 7 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ಚುನಾವಣೆ ಅಖಾಡ ರೆಡಿಯಾಗಿದೆ.

ಅಪ್ಪಾಸಾಹೇಬ ಪಟ್ಟಣಶೆಟ್ಟಿ

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ:ವಿಜಯಪುರ ನಗರದಲ್ಲಿ ಸದ್ಯ ಬಿಜೆಪಿಯ ಪ್ರಾಬಲ್ಯವಿದ್ದರೂ ಪಕ್ಷ ಸಂಘಟನೆ ಅಚ್ಚುಕಟ್ಟಾಗಿಲ್ಲ ಎನ್ನಲಾಗುತ್ತಿದೆ. ಹಾಲಿ ಶಾಸಕ ಯತ್ನಾಳ್, ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಮತ್ತು ಮೂಲ ಬಿಜೆಪಿ ಕಾರ್ಯಕರ್ತರ ನಡುವಿನ ತಿಕ್ಕಾಟ ಪೆಟ್ಟು ಕೊಡಬಹುದು ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಸುರೇಶ ಬಿರಾದಾರ

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ಗಾಗಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಸುರೇಶ ಬಿರಾದಾರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್​ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಯಲ್ಲಿ ಟಿಕೆಟ್​ ದಕ್ಕಿಸಿಕೊಂಡ ಯತ್ನಾಳ್, ಗೆದ್ದು ಬಂದರು. ಈ ಬಾರಿ ಕೂಡ ಪಕ್ಷದ ಟಿಕೆಟ್​ಗಾಗಿ ಹಾಲಿ ಶಾಸಕ ಯತ್ನಾಳ್​ ಸೇರಿದಂತೆ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಸುರೇಶ್ ಬಿರಾದಾರ ಬೇಡಿಕೆ ಇಟ್ಟಿದ್ದಾರೆ. ಪೈಪೋಟಿ ಹೆಚ್ಚಾಗಿದ್ದರಿಂದ ಹೈಕಮಾಂಡ್​ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.

ಮಕಬುಲ್ ಬಾಗವಾನ್

ಕಾಂಗ್ರೆಸ್​​ನಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. 20ಕ್ಕೂ ಅಧಿಕ ಜನ ಟಿಕೆಟ್ ಕೇಳಿದ್ದಾರೆ. ಈ ಪೈಕಿ ಮಾಜಿ ಶಾಸಕ ಮುಕಬುಲ್ ಭಾಗವಾನ, 2018ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಮೀದ್ ಮುಶ್ರೀಪ್, ಮೊಹ್ಮದ್ ರಫೀಕ್​ ಟಪಾಲ್ ನಡುವೆ ಸ್ಪರ್ಧೆ ಇದೆ.

ಹಮೀದ್ ಮುಶ್ರೀಫ್

ಜೆಡಿಎಸ್​ ಕೂಡ ಹಿಂದೆ ಬಿದ್ದಿಲ್ಲ. ಹಾಗಾಗಿ ಟಿಕೆಟ್​ಗಾಗಿ ಈ ಪಕ್ಷದಲ್ಲಿಯೂ ಪೈಪೋಟಿ ಜೋರಿದೆ. ಆದರೆ, ಅನ್ಯ ಪಕ್ಷದಿಂದ ಬಂಡೇಳುವ ನಾಯಕರಿಗೆ ಮೊದಲ ಪ್ರಾಶಸ್ತ್ಯ ಎನ್ನುವ ಹಾಗೆ ಅವರಿಗೆ ಟಿಕೆಟ್​ ಕೊಡುವ ಆಲೋಚನೆಯೂ ಇದೆ ಎನ್ನುತ್ತಾರೆ ರಾಜಕೀಯ ಪಂಡಿತರು.

ಅಭ್ಯರ್ಥಿಗಳ ಗೆಲುವಿನ ಅಂತರ

ಆಮ್​ ಆದ್ಮಿ​ ಪಕ್ಷದಿಂದ ಹಾಶಿಂಪೀರ ವಾಲೀಕಾರ ಎಂಬುವರು ಕಣಕ್ಕಿಳಿಯಲಿದ್ದಾರೆ. ಸದ್ಯಕ್ಕೆ ಇವರೊಬ್ಬರನ್ನು ಹೊರತುಪಡಿಸಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಮತ್ತು ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಈವರೆಗೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಗಾಗಿ ಕ್ಷೇತ್ರ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.

ಪುರುಷ ಮತ್ತು ಮಹಿಳಾ ಮತದಾರರ ಮಾಹಿತಿ

ಕ್ಷೇತ್ರದಲ್ಲಿ ಗೆದ್ದು ಬೀಗಿದವರು..:1951ರಿಂದ ಇಲ್ಲಿಯವರೆಗೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಹೆಚ್ಚು ಬಾರಿ ಕಾಂಗ್ರೆಸ್​ ಪಕ್ಷವೇ ವಿಜಯ ಪತಾಕೆ ಹಾರಿಸಿದೆ. 1951ರ ಚುನಾವಣೆಯಲ್ಲಿ ಪಿ.ಕೆ.ಮಲ್ಲನಗೌಡ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರೆ, 1957ರಲ್ಲಿ ಸರದಾರ ನಾಗೂರ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. 1962ರ ಚುನಾವಣೆಯಲ್ಲಿ ರೇವಣಸಿದ್ದಪ್ಪ ನಾವದಗಿ (ಕಾಂಗ್ರೆಸ್), 1967ರಲ್ಲಿ ಪಿ.ಬಿ.ಮಲ್ಲನಗೌಡ (ಕಾಂಗ್ರೆಸ್), 1972ರಲ್ಲಿ ಕೆ.ಟಿ‌.ರಾಠೋಡ (ಕಾಂಗ್ರೆಸ್), 1978ರಲ್ಲಿ ಸೈಯದ್ ಭಕ್ಷಿ (ಜನತಾ ಪಾರ್ಟಿ), 1983ರಲ್ಲಿ ಗುರುಪಾದಯ್ಯ ಗಚ್ಚಿನಮಠ (ಬಿಜೆಪಿ), 1985ರಲ್ಲಿ ಎಂಎಲ್ ಉಸ್ತಾದ (ಕಾಂಗ್ರೆಸ್), 1989ರಲ್ಲಿ ಎಂಎಲ್ ಉಸ್ತಾದ (ಕಾಂಗ್ರೆಸ್), 1994ರ ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್​ ಬಿಜೆಪಿಯಿಂದ, 1999ರಲ್ಲಿ ಎಂ.ಎಲ್.ಉಸ್ತಾದ ಕಾಂಗ್ರೆಸ್ ಪಕ್ಷದಿಂದ, 2004ರ ಚುನಾವಣೆಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದಾರೆ.

ವಿಜಯಪುರ ನಗರ ಕ್ಷೇತ್ರದ ವಿವರ

2008ರಲ್ಲಿ ವಿಜಯಪುರ ನಗರ ಕ್ಷೇತ್ರ ರಚನೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪು ಪಟ್ಟಣಶೆಟ್ಟಿ ಗೆಲುವು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸೈಯಬುದ್ದೀನ್ ಹೊರ್ತಿ ಅವರಿಗಿಂತ 17,564 ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಕಬುಲ್ ಬಾಗವಾನ 48,615 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದ ಬಸನಗೌಡ ಪಾಟೀಲ್​ ಯತ್ನಾಳ್​ 39,235 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಅಪ್ಪು ಪಟ್ಟಣಶೆಟ್ಟಿಗಿಂತ ಮಕಬುಲ್ ಬಾಗವಾನ 22,380 ಮತಗಳ ಅಂತರದಿಂದ ಗೆಲುವು ಕಂಡಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್​ 76,308 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್​ ಅಭ್ಯರ್ಥಿ ಅಬ್ದುಲ್​ ಹಮೀದ್ ಮುಶ್ರೀಫ್ 69,895 ಮತಗಳನ್ನು ಪಡೆದು ಸೋಲುಂಡರು. ಈ ಚುನಾವಣೆಯಲ್ಲಿ 6,413 ಮತಗಳ ಅಂತರದಿಂದ ಬಿಜೆಪಿ ಜಯಗಳಿಸಿದೆ.

ಮತದಾರರ ಲೆಕ್ಕಾಚಾರ: ಕ್ಷೇತ್ರದಲ್ಲಿ 2,47,240 ಒಟ್ಟು ಮತದಾರರಿದ್ದಾರೆ. ಇದರಲ್ಲಿ 1,24,652 ಪುರುಷ ಮತದಾರರಿದ್ದರೆ, 1,22,520 ಮಹಿಳೆಯರು ಮತ್ತು 68 ಇತರೆ ಮತದಾರರಿದ್ದಾರೆ. ಮುಸ್ಲಿಂ, ಲಿಂಗಾಯತ, ಬ್ರಾಹ್ಮಣ, ಮರಾಠಾ, ದಲಿತ ಮತದಾರರು ನಿರ್ಣಾಯ ಸಮುದಾಯಗಳಾಗಿವೆ.

ಕ್ಷೇತ್ರದ ವೈಶಿಷ್ಟ್ಯ: ಕಿತ್ತೂರು-ಕರ್ನಾಟಕ ಪ್ರದೇಶಕ್ಕೆ ಒಳಪಡುವ ಈ ಕ್ಷೇತ್ರ 2008ರಲ್ಲಿ ಹುಟ್ಟಿಕೊಂಡಿತು. ಕ್ಷೇತ್ರ ಪುನರ್​ ವಿಂಗಡಣೆಯಿಂದ ಇಲ್ಲಿಯವರೆಗೆ ಕೇವಲ ಮೂರು ಚುನಾವಣೆಯನ್ನು ಮಾತ್ರ ಎದುರಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 62.01 % ಮತಗಳು ಚಲಾವಣೆಯಾಗಿದ್ದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ 1399 ನೋಟಾ ಮತಗಳು ಚಲಾವಣೆಯಾಗಿದ್ದು ಕ್ಷೇತ್ರದ ವೈಶಿಷ್ಟ್ಯ. 2018 ರಿಂದ ಭಾರತೀಯ ಜನತಾ ಪಾರ್ಟಿ ಎರಡು ಬಾರಿ ಗೆದ್ದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ಬಾರಿ ಗೆಲುವು ಕಂಡಿದೆ.

ಇದನ್ನೂ ಓದಿ:ಬೊಂಬೆನಗರಿಯಲ್ಲಿ ಹೇಗಿದೆ ಎಲೆಕ್ಷನ್‌ ಹವಾ? ಹೆಚ್ಡಿಕೆ ಕೋಟೆಯಲ್ಲಿ ಕೈ, ಕಮಲ ಲೆಕ್ಕಾಚಾರವೇನು?

ABOUT THE AUTHOR

...view details