ಬೆಂಗಳೂರು:ರಾಜ್ಯ ರಾಜಧಾನಿಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ವಿಜಯನಗರ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರದೇಶಗಳು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಂದ ಕೂಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಬಿಜೆಪಿಯ ಕಾರ್ಪೊರೇಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೂ ಕ್ಷೇತ್ರ ಮಾತ್ರ ಕಾಂಗ್ರೆಸ್ನ ಹಿಡಿತದಲ್ಲಿದೆ.
ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ ವಾರ್ಡ್, ಬಾಪೂಜಿನಗರ, ಗಾಳಿ ಆಂಜನೇಯ ವಾರ್ಡ್, ದೀಪಾಂಜಲಿನಗರ ವಾರ್ಡ್ಗಳು ಈ ಕ್ಷೇತ್ರದಲ್ಲಿ ಬರುತ್ತವೆ.
2008 ರಿಂದ ವಿಜಯನಗರ ಕ್ಷೇತ್ರ ಕಾಂಗ್ರೆಸ್ನ ಗಟ್ಟಿ ನೆಲೆಯಾಗಿದೆ. 2008, 2013, 2018 ರ ಚುನಾವಣೆಯಲ್ಲಿ ಕಾಂಗ್ರೆಸ್ನ ಎಂ. ಕೃಷ್ಣಪ್ಪ ಅವರು ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಕೃಷ್ಣಪ್ಪ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆತಂದು ಹವಾ ಸೃಷ್ಟಿಸಿದ್ದಾರೆ.
2008 ರಲ್ಲಿ ಕಾಂಗ್ರೆಸ್ನ ಕೃಷ್ಣಪ್ಪ ಅವರು 53,297 ಮತಗಳನ್ನು ಪಡೆದರೆ, ಬಿಜೆಪಿ 28,935, ಜೆಡಿಎಸ್ 19,155 ಮತ ಪಡೆದಿತ್ತು. 2013 ರಲ್ಲಿ ಕಾಂಗ್ರೆಸ್ ಕೃಷ್ಟಪ್ಪ 76,891 ಮತ ಪಡೆದರೆ ಬಿಜೆಪಿಯ ಸೋಮಣ್ಣ ಅವರು 44,249 ಮತ, ಜೆಡಿಎಸ್ ಕೇವಲ 4,253 ಮತ ಪಡೆದಿತ್ತು. 2018 ರಲ್ಲಿ ಕಾಂಗ್ರೆಸ್ 73,353 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಹೆಚ್. ರವೀಂದ್ರ ಅವರು 70,578 ಮತ 3 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹಾಗಾಗಿ ಈ ಬಾರಿ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಬಾರಿಯ ಪರಾಜಿತ ಅಭ್ಯರ್ಥಿ ಹೆಚ್. ರವೀಂದ್ರ, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ, ಮಾಜಿ ಎಂಎಲ್ಸಿ ಅಶ್ವತ್ಥನಾರಾಯಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.