ಚಿಕ್ಕೋಡಿ:ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಬ್ಬರು ಸಮಾಜ ಸೇವೆಗೋಸ್ಕರ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಸದ್ಯ ಚುನಾವಣೆ ರಣಾಂಗಣಕ್ಕೆ ಇಳಿದಿದ್ದಾರೆ. ತಮಿಳುನಾಡಿನಲ್ಲಿ ಐಎಸ್ಐ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಶಂಭು ಕಲ್ಲೋಳಿಕರ ಹಾಗೂ ಪೊಲೀಸ್ ಇಲಾಖೆಯಲ್ಲಿ ಸಿಪಿಐ ಸೇವೆ ಸಲ್ಲಿಸಿದ್ದ ಬಸವರಾಜ್ ಬಿಸನಕೊಪ್ಪ ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಸದ್ಯ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ರಾಯಭಾಗ ವಿಧಾನಸಭಾ ಕ್ಷೇತ್ರದಿಂದ ಶಂಭು ಕಲ್ಲೋಳಿಕರ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಸವರಾಜ್ ಬಿಸನಕೊಪ್ಪ ಅವರು ಸ್ಪರ್ಧಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಬರಟ್ಟಿ ಗ್ರಾಮದ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ರಾಯಭಾಗ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಶಂಭು ಕಲ್ಲೋಳಿಕರ ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಹುಟ್ಟೂರಾದ ಹಾರೊಗೇರಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದರು. ನಂತರ ಧಾರವಾಡ ನಗರಕ್ಕೆ ಉನ್ನತ ವ್ಯಾಸಂಗ ಮಾಡಿ ದೆಹಲಿಯಲ್ಲಿ ಇದ್ದುಕೊಂಡೆ ಐಎಎಸ್ ಪರೀಕ್ಷೆಗಾಗಿ ವಿದ್ಯಾಭ್ಯಾಸ ನಡೆಸಿದರು. 1991ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಶಂಭು ಅವರು, 1993ರಿಂದ 1996 ರವರೆಗೆ ಪಶ್ಚಿಮ ಬಂಗಾಳದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ತಮಿಳುನಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆಗ ತಮಿಳುನಾಡಿನ ಮೂಲದ ಪಿ.ಅಮುದಾ ಎಂಬುವವರ ಜೊತೆಗೆ ವಿವಾಹ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು.
ಶಂಭು ಕಲ್ಲೋಳಿಕರರಿಂದ ಚುನಾವಣೆಗೆ ಭರ್ಜರಿ ಸಿದ್ಧತೆ:ಶಂಭು ಅವರ ಪತ್ನಿ ಪಿ.ಅಮುದಾ ಸಹ ತಮಿಳುನಾಡಿನ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ರಾಯಭಾಗ ವಿಧಾನಸಭಾ ಕ್ಷೇತ್ರದ ಮೀಸಲು ಕ್ಷೇತ್ರದಿಂದ ಶಂಭು ಕಲ್ಲೋಳಿಕರ ಅವರು ಈಗಾಗಲೇ ಬರದಿಂದ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಬಿ ಫಾರಂ ಸಿಗುತ್ತದೆ ಎಂದು ವಿಶ್ವಾಸದಲ್ಲಿದ್ದಾರೆ. ಮೂರು ಬಾರಿ ಆಯ್ಕೆಯಾದ ಹಾಲಿ ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಕಣಕ್ಕೆ ಇಳಿಯಲು ಶಂಭು ಕಲ್ಲೋಳಿಕರ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಸ್ವಯಂ ನಿವೃತ್ತ ಪಡೆದ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ''ನಾನು ತಮಿಳುನಾಡಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನಾನು ಹುಟ್ಟಿದ ಊರಿಗೆ ತಾಲೂಕಿಗೆ ಕೊಡುಗೆ ನೀಡಬೇಕು. ನನ್ನ ದೃಷ್ಟಿಯಲ್ಲಿ ಈ ಸಮಾಜದಲ್ಲಿ ಇನ್ನೂ ಬದಲಾವಣೆ ಕ್ರಾಂತಿ ಆಗಬೇಕಾಗಿದೆ. ಸರ್ಕಾರಿ ನೌಕರನಾಗಿ ಏನು ಮಾಡುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ನನಗೆ ಟಿಕೆಟ್ ಸಿಗುವುದು ವಿಶ್ವಾಸವಿದೆ'' ಎಂದು ಹೇಳಿದರು. ''ನಾನು ರಾಯಭಾಗ ವಿಧಾನಸಭಾ ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ಕೆಲವೇ ಕೆಲವು ದಿನಗಳಲ್ಲಿ ದೇಶದಲ್ಲಿ ರಾಯಭಾಗ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿ ದೇಶದ ಗಮನವನ್ನು ಸೆಳೆಯುತ್ತೇನೆ'' ಎಂದು ಭರವಸೆ ನೀಡಿದರು.
ಅಥಣಿ ಕ್ಷೇತ್ರದಿಂದ ಸಿಪಿಐಯಾಗಿದ್ದ ಬಸವರಾಜ್ ಬಿಸನಕೊಪ್ಪ ಸ್ವರ್ಧೆ:ಕುಡಚಿ ಶಾಸಕ ಪಿ.ರಾಜೀವ್ ತರ ಪಿಎಸ್ಐ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ರೀತಿಯಲ್ಲಿ ವಿಜಯಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಸವರಾಜ್ ಬಿಸನಕೊಪ್ಪ ತಮ್ಮ ಸಿಪಿಐ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಮೂಲತಃ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಇವರು ಪೊಲೀಸ್ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಥಣಿ ವಿಧಾನಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಗಳಾದ ಮಹೇಶ್ ಕುಮಠಳ್ಳಿ, ಲಕ್ಷ್ಮಣ್ ಸವದಿ, ಗಜಾನನ್ ಮಂಗಸೂಳಿ ವಿರುದ್ಧ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಬಸವರಾಜ್ ಬಿಸನಕೊಪ್ಪ ಈಟಿವಿ ಭಾರತ ಜೊತೆಗೆ ದೂರವಾಣಿ ಮೂಲಕ ಮಾತನಾಡಿ, ''ನಾನು ಹುಟ್ಟಿ ಬೆಳೆದು ಮತ್ತು ಪಿಎಸ್ಐ ಆಗಿ ಅಥಣಿಯಲ್ಲಿ ಕಾರ್ಯನಿರ್ವಹಿಸಿದ್ದು, ಜನತೆಯೊಂದಿಗೆ ನಿಕಟ ಒಡನಾಟ ಇಟ್ಟುಕೊಂಡಿದ್ದೇನೆ. ನೌಕರಿ ಮಾಡಿ ಬಡ್ತಿ ಪಡೆದು ಐಶಾರಾಮಿಯಾಗಿ ಜೀವನ ನಡೆಸಬಹುದಿತ್ತು. ಆದರೆ ರಾಜಕೀಯದ ಮೂಲಕ ಸಮಾಜ ಅಥವಾ ಜನಸೇವೆ ಮಾಡುವ ಉದ್ದೇಶ ಹೊಂದಿರುವ ಕಾರಣಕ್ಕೆ, ನಾನು ಸಿಪಿಐ ಸ್ಥಾನಕ್ಕೆ ಇದೇ ಮಾರ್ಚ್ 22ರಂದು ರಾಜೀನಾಮೆ ಅಂಗೀಕಾರವಾಗಿದೆ. ಅಂದಿನಿಂದ ಸಮಾಜಮುಖಿ ಕಾರ್ಯಕ್ಕಾಗಿ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವೆ ಎಂದು ಬಸವರಾಜ ಬಿಸನಕೊಪ್ಪ ಹೇಳಿದರು. ನಾನು ರಾಜಿನಾಮೆ ಕೊಟ್ಟ ನಂತರ ಅಥಣಿ ವಿಧಾನಸಭಾ ಕ್ಷೇತ್ರಾದ್ಯಂತ ಸುತ್ತಾಡಿ ಎಲ್ಲ ಧರ್ಮ, ಜಾತಿ, ಮೇಲು- ಕೀಳು ಎನ್ನದೇ ಎಲ್ಲ ವರ್ಗದವರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿರುವೆ. ದಿನದಿಂದ ದಿನಕ್ಕೆ ಎಲ್ಲ ಸಮಾಜಗಳ ಮುಖಂಡರು, ಯುವಕರು ಕಲ್ಯಾಣ ಪ್ರಗತಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯ ರಾಜಕಾರಣಕ್ಕೆ ಬರಲಿದ್ದಾರಾ ಸಂಸದೆ ಸುಮಲತಾ? ಬಿಜೆಪಿ ಪ್ಲ್ಯಾನ್ ಏನು?