ಕರ್ನಾಟಕ

karnataka

ETV Bharat / assembly-elections

ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ನಾಳೆ ಬಿಡುಗಡೆ, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ: ಹೆಚ್​ಡಿಕೆ - assembly election 2023

ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲು ದಳಪತಿಗಳು ನಿರ್ಧಾರ ಮಾಡಿದ್ದಾರೆ. ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

By

Published : Mar 31, 2023, 10:15 PM IST

ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಜೊತೆಗೆ ಮಾತನಾಡಿದರು.

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ನಾಳೆ ಬಿಡುಗಡೆ ಮಾಡಲು ದಳಪತಿಗಳು ನಿರ್ಧರಿಸಿದ್ದಾರೆ. ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ಪರ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ''ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ನಾಳೆ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ'' ಎಂದು ಹೇಳಿದರು.

ನಾಳೆಯಿಂದ ಪ್ರಚಾರ:''ನಾಳೆಯಿಂದ ಚಾಮರಾಜನಗರ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಲ್ಲಿ ಏ.12ರವರೆಗೂ ಪ್ರಚಾರ ಮಾಡುತ್ತೇನೆ. ಏ.13ರಿಂದ 20ರವರೆಗೂ ನಾಮಪತ್ರ ಸಲ್ಲಿಕೆಗೆ ಹಲವು ಕ್ಷೇತ್ರಗಳಿಗೆ ಹೋಗುತ್ತೇನೆ.‌ ಇನ್ನು ಏ.21 ರಿಂದ 24ರವರೆಗೂ ರಾಮನಗರ, ಚನ್ನಪಟ್ಟಣ ಕನಕಪುರದಲ್ಲಿ ಪ್ರಚಾರ ಮಾಡುತ್ತೇನೆ.‌ ಸಮಯ ವ್ಯಯ ಮಾಡದೇ ಕೆಲಸ ಮಾಡಲಾಗುವುದು'' ಎಂದು ತಿಳಿಸಿದರು.

''ಸರ್ವೆ ರಿಪೋರ್ಟ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಗುರಿ ತಲುಪುವುದಕ್ಕೆ ಬೇಕಾದ ಕೆಲಸ ಮಾಡುತ್ತೇನೆ. ಬಸವನಗುಡಿಯಲ್ಲಿ ಈ ಬಾರಿ ಜೆಡಿಎಸ್ ಗೆಲ್ಲುತ್ತದೆ. ಜನರು ಜೆಡಿಎಸ್ ಗೆಲ್ಲಿಸುವುದಕ್ಕೆ ನಿರ್ಧಾರ ಮಾಡ್ತಿದ್ದಾರೆ. ಎಲ್ಲರೂ‌ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎ.ಟಿ.ರಾಮಸ್ವಾಮಿ ಅವರನ್ನು ಹೊರಗೆ ಹಾಕಿಲ್ಲ: ಜೆಡಿಎಸ್​ನವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ರು ಎಂಬ ಎ.ಟಿ.ರಾಮಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ''ನಾನು ಅವರನ್ನು ಹೊರಗೆ ಹಾಕಿಲ್ಲ. ಹಾಸನಕ್ಕೆ ಸಂಬಂಧಿಸಿದ ನಿರ್ಣಯ ನಾನು ಮಾಡಿಲ್ಲ. ಕಳೆದ ಎರಡು ವರ್ಷದ ರಾಜಕೀಯ ಹೇಗೆ ನಡೆದಿದೆ ಅಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ. ರಾಮಸ್ವಾಮಿ ಹಾಗೇ ಹೇಳಿರಬೇಕು. ಗುಬ್ಬಿ ಶ್ರೀನಿವಾಸ್ ಕೂಡಾ ಅದೇ ಹೇಳಿದ್ದು ಅಲ್ಲವೇ?. ಘಟನೆಗೆ ಏನಾದರು ಕಾರಣ ಹೇಳಬೇಕು ಅದಕ್ಕೆ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಏನಾಗಿದೆ ಅಂತ ಗೊತ್ತಿದೆ'' ಎಂದರು.

ನನಗೇನು ಆತಂಕ ಇಲ್ಲ:ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ರಮ್ಯಾ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ''ಯಾರೇ ಸ್ಪರ್ಧೆ ಮಾಡಿದ್ರು ನನಗೇನು ಆತಂಕ ಇಲ್ಲ. ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದು ನನಗೆ ಮುಖ್ಯ ಅಲ್ಲ. ಈಗಾಗಲೇ ನಾನು ಚನ್ನಪಟ್ಟಣದಿಂದ ನಿಲ್ಲಬೇಕು ಅಂತ ಆಗಿದೆ. ಕಾರ್ಯಕರ್ತರು ತೀರ್ಮಾನ‌ ಮಾಡಿದ್ದಾರೆ. ನಾನು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ. ನಾನು ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ. ಒಂದು ಕ್ಷೇತ್ರದಲ್ಲಿ ಮಾತ್ರ ನಾನು ಸ್ವರ್ಧೆ ಮಾಡುತ್ತೇನೆ'' ಎಂದು ಸ್ಪಷ್ಟಪಡಿಸಿದರು.

ವರುಣಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಹೋದಂತೆ ವರುಣಾಗೂ ಪ್ರಚಾರಕ್ಕೆ ಹೋಗ್ತೀನಿ. ವರುಣಾ ಕ್ಷೇತ್ರದಲ್ಲಿ ಯಾವ ರೀತಿ ತಂತ್ರಗಾರಿಕೆ, ಪ್ರಚಾರ ಮಾಡಬೇಕು ಎಂಬುದನ್ನ ಸ್ಥಳೀಯ ನಾಯಕರು ತೀರ್ಮಾನ ಮಾಡ್ತಾರೆ'' ಎಂದು ತಿಳಿಸಿದರು.

ಖೂಬಾ ಮನೆಗೆ ವಾಪಸ್ ಆಗಿದ್ದಾರೆ:''ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಅವರ ಮನೆಗೆ ಅವರು ವಾಪಸ್ ಬಂದಿದ್ದಾರೆ'' ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸಂಜೆ ನಗರದ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವಿವಿಧ ನಾಯಕರು ಹಾಗೂ ಕೆಲ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಸಭೆ ನಡೆಸಿದರು.

ಅಮ್ಮನ ಸನ್ನಿಧಿಯಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ:ನಾಯಕರ ಮನೆಗೆ ಭೇಟಿ ನೀಡುವ ಮುನ್ನಬಂಡೆ ಮಹಾಕಾಳಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಪೂಜೆಯ ವೇಳೆ ಬಸವನಗುಡಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅಮ್ಮನವರ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಪ್ರಣಾಳಿಕೆ ಪತ್ರವನ್ನು ಕುಮಾರಸ್ವಾಮಿ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸದಸ್ಯ ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು. ಮುಖಂಡರ ಮನೆಗಳಿಗೆ ಭೇಟಿಯ ವೇಳೆ ಕ್ಷೇತ್ರದ ಎಲ್ಲಾ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ:ಶಿಕಾರಿಪುರದಿಂದಲೇ ವಿಜಯೇಂದ್ರ ಕಣಕ್ಕೆ: ಸಿದ್ದರಾಮಯ್ಯ ವಿರುದ್ಧದ ಸ್ಪರ್ಧೆ ವದಂತಿಗೆ ತೆರೆ ಎಳೆದ ಬಿಎಸ್​ವೈ

ABOUT THE AUTHOR

...view details