ಹುಬ್ಬಳ್ಳಿ:ಹಿರಿಯರಿದ್ದೀರಿ ನೀವು ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ನಿರ್ದೇಶನ ನೀಡಿದೆ. ಈ ಬಗ್ಗೆ ಮಾಜಿ ಸಿಎಂ ಅವರೇ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್ ಮಾಡೆಲ್ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಜಗದೀಶ್ ಶೆಟ್ಟರ್ ''ನನಗೆ ವರಿಷ್ಠರಿಂದ ಪೋನ್ ಬಂದಿದ್ದು ಸತ್ಯ. ನೀವು ಹಿರಿಯರಿದ್ದೀರಿ, ಬೇರೆಯವರಿಗೆ ಅವಕಾಶ ಕೊಡಿ ಎಂದು ನನಗೆ ಹೈಕಮಾಂಡ್ ಹೇಳಿದೆ. ಕಳೆದ 30 ವರ್ಷಗಳಿಂದ ನಾನೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೈಕಮಾಂಡ್ಗೆ ತಿಳಿಸಿದ್ದೇನೆ'' ಎಂದಿದ್ದಾರೆ.
''ನೂರಾರು ಜನರಿಗೆ ಟಿಕೆಟ್ ಕೊಡುವ ಕೆಲಸ ನಾನೂ ಮಾಡಿದ್ದೇನೆ. ನನಗೆ ಟಿಕೆಟ್ ನೀಡಬಾರದು ಎನ್ನಲ್ಲಿಕ್ಕೆ ಕಾರಣ ಏನು? ಸರ್ವೆಯಲ್ಲಿ ಪಾಸಿಟಿವ್ ಇದೆ. ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ. ಪಕ್ಷಕ್ಕೆ ರಾಯಲ್ ಆಗಿ ಕೆಲಸ ಮಾಡಿದ್ದೇನೆ. ರಾಯಲ್ ಆಗಿ ಕೆಲಸ ಮಾಡಿದ್ದಕ್ಕೆ ಈ ಶಿಕ್ಷೆ ಏನು? ಹೈಕಮಾಂಡ್ ಹೇಳಿದ್ದಕ್ಕೆ ನನ್ನ ಮನಸ್ಸಿಗೆ ಬೇಜಾರಾಗಿದೆ ಎಂದರು. ನಾಮಪತ್ರ ಸಲ್ಲಿಸಲು ಇನ್ನೂ ಎರಡೂ ದಿನ ಸಮಯವಿದೆ. ಈಗ ಪೋನ್ ಮಾಡಿದರೆ ಏನ್ ಮಾಡಬೇಕು. ಬಂದು ಭೇಟಿಯಾಗಿ ಎಂದು ಹೇಳಿದ್ದಾರೆ. 'ಸರಿಯಾದ ಸ್ಥಾನಮಾನವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವರಿಷ್ಠರ ಮೇಲೆ ನನಗೆ ನಂಬಿಕೆ ಇದೆ. ಕಾದು ನೋಡಬೇಕಿದೆ‘‘ ಎಂದು ಜಗದೀಶ್ ಶೆಟ್ಟರ್ ತುಸು ಬೇಜಾರಿನಿಂದಲೇ ಸ್ಪಷ್ಟನೆ ಕೊಟ್ಟಿದ್ದಾರೆ.
ಈಶ್ವರಪ್ಪ ಸ್ಟ್ಯಾಂಡ್ ಬೇರೆ, ನನ್ನ ಸ್ಟ್ಯಾಂಡ್ ಬೇರೆ: ಮುಂದುವರಿದು ಮಾತನಾಡಿದ ಅವರು, ಈಶ್ವರಪ್ಪ ಸ್ಟ್ಯಾಂಡ್ ಬೇರೆ, ನನ್ನ ಸ್ಟ್ಯಾಂಡ್ ಬೇರೆ, ನಾನು ಸ್ಪರ್ಧೆ ಮಾಡುತ್ತೇನೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರ್ತೆನಿ. ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ಇನ್ನೂ ಹತ್ತು ವರ್ಷಗಳ ಸಕ್ರೀಯ ರಾಜಕಾರಣದಲ್ಲಿ ಇರ್ತೆನಿ. ನೂರಾರು ಜನರಿಗೆ ಟಿಕೆಟ್ ಕೊಟ್ಟಿದ್ದೇನೆ. ಪಕ್ಷವನ್ನ ಸಂಘಟನೆ ಮಾಡಿದ್ದೇನೆ. ನನಗೆ ಈ ರೀತಿ ಆಗಿದ್ದು ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಿಎಂ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.