ಕರ್ನಾಟಕ

karnataka

ETV Bharat / assembly-elections

ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದ ನಂತರವೇ ಕಾಂಗ್ರೆಸ್ ಪಟ್ಟಿ ಅಂತಿಮ ಸಾಧ್ಯತೆ..? - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬಿಜೆಪಿ ಪಟ್ಟಿ ಬಿಡುಗಡೆ ಬಳಿಕವೇ ಕಾಂಗ್ರೆಸ್ ಪಟ್ಟಿ ಅಂತಿಮ?- 15 ಕ್ಷೇತ್ರಗಳನ್ನು ಬಿಟ್ಟು ಉಳಿದೆಡೆ ಬಹುತೇಕ ಫೈನಲ್.

Congress
ಕಾಂಗ್ರೆಸ್

By

Published : Apr 11, 2023, 5:05 PM IST

ಬೆಂಗಳೂರು:ರಾಜ್ಯ ನಾಯಕರು ನಿನ್ನೆಯಿಂದ ನಡೆಸುತ್ತಿರುವ ಸರಣಿ ಸಭೆ ಫಲ ನೀಡಿದ್ದು, ಬಾಕಿ ಇರುವ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಹ ಅಂತಿಮಗೊಂಡಿದೆ ಎಂಬ ಮಾಹಿತಿ ಇದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಅಂತಿಮಗೊಳಿಸಲು ಇಂದು ಸಹ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮತ್ತಿತರ ರಾಜ್ಯ ನಾಯಕರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸುದೀರ್ಘ ಸಭೆ ನಡೆಸಿದ್ದಾರೆ.

ಒಟ್ಟು 224 ಕ್ಷೇತ್ರಗಳ ಪೈಕಿ ಮೊದಲ ಎರಡು ಪಟ್ಟಿಯಲ್ಲಿ 166 ಅಭ್ಯರ್ಥಿಗಳ ಹೆಸರು ಘೋಷಿಸಿರುವ ಕಾಂಗ್ರೆಸ್ ನಾಯಕರಿಗೆ ಉಳಿದ 58 ಸ್ಥಾನ ಅಂತಿಮಗೊಳಿಸುವುದು ಸವಾಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಕಡೆ ದೊಡ್ಡ ಮಟ್ಟದ ಬಂಡಾಯ ಎದುರಿಸುತ್ತಿರುವ ನಾಯಕರು, ಮುಂದೆ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯದಂತೆ ಮನವೊಲಿಸುವ ಕಾರ್ಯವನ್ನೂ ಮಾಡಬೇಕಿದೆ. ಇದೇ ಬರುವ 13ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಆ ನಂತರ ಮನವೊಲಿಕೆ ಕಷ್ಟಸಾಧ್ಯ.

ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮಣೆ:ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಿರುವ ಕಾಂಗ್ರೆಸ್ ಮುಂದೆ ರಾಜ್ಯದಲ್ಲಿ ಐದು ವರ್ಷ ಅಧಿಕಾರ ನಡೆಸುವ ಕನಸು ಕಾಣುತ್ತಿದೆ. ಅಲ್ಲದೇ ಅದಕ್ಕಾಗಿಯೇ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮಣೆ ಹಾಕುವುದಾಗಿ ಹೇಳಿದೆ. ಎರಡನೇ ಪಟ್ಟಿಯಲ್ಲಿ ಅಷ್ಟಾಗಿ ಗೆಲ್ಲುವ ಅಭ್ಯರ್ಥಿಗಳು ಕಾಣದಿದ್ದರೂ, ಜಾತಿ ಸಮೀಕರಣಕ್ಕಾಗಿ ಕೆಲವರಿಗೆ ಮಣೆ ಹಾಕಿದೆ ಎಂಬ ಅಂಶ ಬೆಳಕಿಗೆ ಬರುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್​ನಲ್ಲಿ 3ನೇ ಪಟ್ಟಿ ಬಹುತೇಕ ಸಿದ್ಧವಾಗಿದೆ ಎಂಬ ಮಾಹಿತಿ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿ ನಿವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಜೊತೆ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ವಿಚಾರ ಸಹ ಚರ್ಚೆಗೆ ಬಂದಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಟಿಕೆಟ್ ಅಂತಿಮಗೊಳಿಸುವ ಸಂಬಂಧ ಚರ್ಚೆ ನಡೆಯಿತು.

ಮೂಲಗಳ ಪ್ರಕಾರ, 58 ಕ್ಷೇತ್ರಗಳಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ ಆಗಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಒಮ್ಮತದ ಅಭಿಪ್ರಾಯ ಮೂಡದ ಕಾರಣ 15 ಕ್ಷೇತ್ರಗಳು ಕಗ್ಗಂಟಾಗಿಯೇ ಉಳಿದಿವೆ ಎನ್ನಲಾಗಿದೆ. ಸದ್ಯ ಮೂರನೇ ಪಟ್ಟಿಗಾಗಿ 20 ಕ್ಷೇತ್ರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಪಟ್ಟಿ ಘೋಷಣೆ ಸದ್ಯವೇ ಆಗಲಿದೆ ಎಂಬ ಮಾಹಿತಿ ಒಂದೆಡೆ ಇದ್ದರೆ, ಬಿಜೆಪಿ ಪಟ್ಟಿ ಬಿಡುಗಡೆ ಬಳಿಕ ಅಗತ್ಯವಿದ್ದರೆ ಸಣ್ಣಪುಟ್ಟ ಬದಲಾವಣೆಯೊಂದಿಗೆ ಮೂರನೇ ಪಟ್ಟಿಯನ್ನು ಒಟ್ಟಾಗಿಯೇ 58 ಹೆಸರುಗಳು ಒಳಗೊಂಡು ಬಿಡುಗಡೆ ಮಾಡುವ ಚಿಂತನೆಯೂ ಮಾಡಲಾಗಿದೆ ಎನ್ನಲಾಗುತ್ತಿದೆ.

ಮತ್ತೆ ಒಂದೆರಡು ಸುತ್ತು ಸಭೆ ನಡೆಯುವ ಸಾಧ್ಯತೆ:ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ 2ರಿಂದ 3 ದಿನದಲ್ಲಿ 3ನೇ ಪಟ್ಟಿ ಬಿಡುಗಡೆ ಮಾಡ್ತೀವಿ ಅಂತ ವಿವರಿಸಿದ್ದಾರೆ. ಆದರೆ, ಅದಕ್ಕೆ ಇನ್ನೂ ಒಂದೆರಡು ಸುತ್ತು ಸಭೆ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ತೀವ್ರ ಗೊಂದಲ ಇರುವ 15 ಕ್ಷೇತ್ರಗಳನ್ನು ಹೈಕಮಾಂಡ್​ ಆಯ್ಕೆಗೆ ಬಿಡಲಾಗಿದೆ. ಇನ್ನು 15 ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳ ಟಿಕೆಟ್ ಘೋಷಣೆ ಆಗುವುದಾ ಅಥವಾ ಹೈಕಮಾಂಡ್​ ಅಂತಿಮಗೊಳಿಸಿದ ಬಳಿಕ ಅದನ್ನೂ ಸೇರಿಸಿಯೇ ಒಟ್ಟಾರೆ ಪಟ್ಟಿ ಬಿಡುಗಡೆ ಆಗುವುದಾ ಅನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

ABOUT THE AUTHOR

...view details