ಹೈದರಾಬಾದ್:ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಮೂವರು ಲೋಕಸಭಾ ಸದಸ್ಯರು ಸೋತಿದ್ದಾರೆ. ಆದರೆ, ಅಖಾಡದಲ್ಲಿದ್ದ ಮೂವರು ಕಾಂಗ್ರೆಸ್ ಸಂಸದರು ಮತ್ತು ಓರ್ವ ಬಿಆರ್‌ಎಸ್ ಸಂಸದರಿಗೆ ಗೆಲುವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಸದಸ್ಯ ಬಂಡಿ ಸಂಜಯ್ ಕುಮಾರ್ ಕರೀಂನಗರದಿಂದ ಸೋತರೆ, ಬಿಜೆಪಿಯ ನಿಜಾಮಾಬಾದ್ ಸಂಸದ ಡಿ.ಅರವಿಂದ್ ಕೊರಟ್ಲಾದಲ್ಲಿ ಸೋಲು ಕಂಡರು. ಅದಿಲಾಬಾದ್‌ನ ಮತ್ತೊಬ್ಬ ಬಿಜೆಪಿ ಲೋಕಸಭಾ ಸದಸ್ಯ ಸೋಯಮ್ ಬಾಪು ರಾವ್ ಅವರು ಬೋತ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನಪ್ಪಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಿಂದ ಕೊಡಂಗಲ್‌ನಿಂದ ಗೆದ್ದರು. ಆದರೆ, ಕಾಮರೆಡ್ಡಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಎನ್.ಉತ್ತಮ್ ಕುಮಾರ್ ರೆಡ್ಡಿ ಕ್ರಮವಾಗಿ ನಲ್ಗೊಂಡ ಮತ್ತು ಹುಜೂರ್ನಗರದಿಂದ ಗೆಲುವಿನ ನಗೆ ಬೀರಿದರು. ಮೇದಕ್ ಕೋಠದ ಬಿಆರ್‌ಎಸ್ ಲೋಕಸಭಾ ಸದಸ್ಯ ಪ್ರಭಾಕರ ರೆಡ್ಡಿ ದುಬ್ಬಾಕ್ ವಿಧಾನಸಭಾ ಕ್ಷೇತ್ರದಿಂದ ಜಯ ಗಳಿಸಿದ್ದಾರೆ.
ತೆಲಂಗಾಣದಲ್ಲಿ ಮೊದಲ ಬಾರಿಗೆ 8 ಸ್ಥಾನಗಳನ್ನು ಗೆದ್ದ ಬಿಜೆಪಿ:ತೀವ್ರ ಪೈಪೋಟಿಯಿಂದ ಕೂಡಿದ್ದ ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಕೊಂಚ ಉತ್ತೇಜನ ನೀಡಿದ್ದರೂ, ಮತ್ತೊಂದೆಡೆ ನಿರಾಸೆಯಾಗಿದೆ. ತೆಲಂಗಾಣ ರಾಜ್ಯ ರಚನೆಯಾದ ನಂತರ ಮೊದಲ ಬಾರಿಗೆ ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಆದರೆ, ನಿರೀಕ್ಷಿತ ಗೆಲುವು ಹಾಗೂ ಪ್ರಮುಖ ನಾಯಕರ ಸೋಲಿನಿಂದ ಪಕ್ಷ ನಿರಾಸೆ ಅನುಭವಿಸಿದೆ. ಕಾಮರಡ್ಡಿಯಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟರಮಣ ರೆಡ್ಡಿ ಗೆಲುವು ಸಾಧಿಸಿರುವುದು ಪಕ್ಷಕ್ಕೆ ಹೊಸ ಹುರುಪು ಮೂಡಿಸಿದೆ. ಈ ಕ್ಷೇತ್ರದಲ್ಲಿ ಸಿಎಂ ಕೆಸಿಆರ್ ಹಾಗೂ ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ಗೆಲುವು ದಾಖಲಿಸಿದೆ. ಆದ್ರೆ, ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ನಿಜಾಮಾಬಾದ್ ಜಿಲ್ಲೆಯ ಆದಿಲಾಬಾದ್, ನಿರ್ಮಲ್, ಮುಥೋಲ್, ಸಿರ್ಪುರ್, ನಿಜಾಮಾಬಾದ್ ಅರ್ಬನ್, ಕಾಮರೆಡ್ಡಿ, ಆರ್ಮರ್ ಹಾಗೂ ಜಿಹೆಚ್ಎಂಸಿ ವ್ಯಾಪ್ತಿಯ ಗೋಶಾಮಹಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.