ಮಂಗಳೂರು: ಜಿಲ್ಲೆಯ ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧವಾಗಿದೆ. ಕ್ಷೇತ್ರದಲ್ಲಿ ಪ್ರಬಲ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಟಿಕೆಟ್ ಮತ್ತು ಗೆಲುವಿಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಜೆಡಿಎಸ್ ಕೂಡ ಹಿಂದೆ ಬಿದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್ನಿಂದ ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೆ, ಆಮ್ ಆದ್ಮಿ ಪಕ್ಷದಿಂದ ಸುಮನಾ ಎನ್ನುವವರು ಕಣಕ್ಕಿಳಿಯಲಿದ್ದಾರೆ. ಸದ್ಯಕ್ಕೆ ಉಳಿದ ಯಾವುದೇ ಪಕ್ಷದಿಂದ ಈವರೆಗೂ ಟಿಕೆಟ್ ಘೋಷಣೆ ಆಗಿಲ್ಲ. ರಾಷ್ಟ್ರೀಯ ಪಕ್ಷ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಕಾದು ನೋಡುವ ತಂತ್ರ ರೂಪಿಸಿವೆ. ಹಾಗಾಗಿ ಕ್ಷೇತ್ರ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ.
ಟಿಕೆಟ್ಗಾಗಿ ಪೈಪೋಟಿ: ಕ್ಷೇತ್ರದಲ್ಲಿ ಕಳೆದ 6 ಬಾರಿ ಬಿಜೆಪಿಯಿಂದ ಗೆದ್ದಿರುವ ಅಂಗಾರ ಅವರ ಮೇಲೆ ಸ್ವತಃ ಬಿಜೆಪಿಗರಿಗೆ ಸಮಧಾನವಿಲ್ಲ. ಅಂಗಾರ ಕೂಡ ಬಿಜೆಪಿ ಟಿಕೆಟ್ ಸಿಕ್ಕೆ ಸಿಗುತ್ತೆ ಎನ್ನುವ ಧೈರ್ಯದಲ್ಲಿಯೂ ಇಲ್ಲ. ಕ್ಷೇತ್ರದಲ್ಲಿ ಆಗದ ಅಭಿವೃದ್ಧಿ ಚಟುವಟಿಕೆಯಿಂದ ಅವರ ಮೇಲೆ ಬಿಜೆಪಿ ಕಾರ್ಯಕರ್ತರಿಗೆ ಒಲವಿಲ್ಲ. ಹಾಗಾಗಿ ಪಕ್ಷದಲ್ಲಿ ಆಕಾಂಕ್ಷಿತರು ಬಿಜೆಪಿ ಟಿಕೆಟ್ಗಾಗಿ ಕಾಯುತ್ತಿದ್ದಾರೆ.
ಟಿಕೆಟ್ ಘೋಷಣೆಯಿಂದ ಗೊಂದಲ: ಇತ್ತ ಕಾಂಗ್ರೆಸ್ನಲ್ಲಿ ಟಿಕೆಟ್ ಘೋಷಣೆಯಾದರೂ ಗೊಂದಲ ಹೆಚ್ಚಿದೆ. ಕಾಂಗ್ರೆಸ್ ಘೋಷಿಸಿದ ಪಟ್ಟಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕೃಷ್ಣಪ್ಪ ಅವರ ಹೆಸರನ್ನು ಅಂತಿಮಗೊಳಿಸಿದೆ. ಆದರೆ, ಕಾಂಗ್ರೆಸ್ ಟಿಕೆಟ್ಗಾಗಿ ಕೃಷ್ಣಪ್ಪ ಸೇರಿದಂತೆ, ನಂದಕುಮಾರ್, ಅಪ್ಪಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಿಪ್ಪಾಡಿ, ಶರತ್ ಚಂದ್ರ ಅರ್ಜಿ ಸಲ್ಲಿಸಿದ್ದರು. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ರಘು ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಹಾಗಾಗಿ ಆರು ಮಂದಿಯ ಅರ್ಜಿಯನ್ನು ಪರಿಶೀಲಿಸಿದ ಕಾಂಗ್ರೆಸ್ ಹೈಕಮಾಂಡ್, ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಿಸಿತ್ತು. ಆದರೆ, ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಿಸಿರುವುದಕ್ಕೆ ನಂದಕುಮಾರ್ ಬಳಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೃಷ್ಣಪ್ಪ ಅವರ ಟಿಕೆಟ್ ರದ್ದುಗೊಳಿಸಿ ನಂದಕುಮಾರ್ ಅವರಿಗೆ ನೀಡಬೇಂದು ಒತ್ತಾಯ ಕೂಡ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರಿಗೆ ಈ ಬಗ್ಗೆ ಮನವಿಯನ್ನು ಸಹ ಸಲ್ಲಿಸಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಆಪ್ ತನ್ನ ಅಭ್ಯರ್ಥಿ ಹೆಸರು ಪ್ರಕಟಿಸಿದ್ದು ಮಾಜಿ ಶಾಸಕ ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಅಭ್ಯರ್ಥಿಯಾಗಿದ್ದಾರೆ.
ಪಕ್ಷಗಳ ಗೆಲುವಿನ ಲೆಕ್ಕಾಚಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರನೇ ಬಾರಿ ಗೆದ್ದ ಬಿಜೆಪಿಯ ಅಂಗಾರ 95205 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಡಾ. ರಘು ಬೆಳ್ಳಿಪ್ಪಾಡಿ ಅವರು 69137 ಮತಗಳನ್ನು ಗಳಿಸಿದ್ದರು. ಗೆಲುವಿನ ಅಂತರ 26068 ಮತಗಳಾಗಿತ್ತು. ಆದರೆ, ಈ ಬಾರಿ ಬಿಜೆಪಿ ಶಾಸಕರ ಮೇಲಿರುವ ಅಸಮಾಧಾನದಿಂದ ಕಾಂಗ್ರೆಸ್ ಲಾಭದ ನಿರೀಕ್ಷೆಯಲ್ಲಿದೆ. ಬಿಜೆಪಿ ಮಾತ್ರ ಈ ಕ್ಷೇತ್ರ ಕೈತಪ್ಪುವುದಿಲ್ಲ ಎಂಬ ವಿಶ್ವಾಸದಲ್ಲಿದೆ. ಇದರ ನಡುವೆ ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಯಾವ ರೀತಿ ಪರಿಣಾಮ ಬೀರುತ್ತವೆ ಅನ್ನೋದನ್ನು ಕಾದು ನೋಡಬೇಕು.