ವಿಜಯಪುರ:ಸಿಂದಗಿ ಮತಕ್ಷೇತ್ರ ಎರಡೇ ವರ್ಷದಲ್ಲಿ ಮತ್ತೊಂದು ಚುನಾವಣೆಗೆ ಸಜ್ಜಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದು ತೋಟಗಾರಿಕೆ ಸಚಿವರಾಗಿದ್ದ ಎಂ.ಸಿ.ಮನಗೂಳಿ ಅವರು 2021 ರಲ್ಲಿ ಕೋವಿಡ್ನಿಂದ ನಿಧನರಾಗಿದ್ದರು. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿಯನ್ನು ಕಾಂಗ್ರೆಸ್ ಸೆಳೆದು ಉಪಚುನಾವಣಾ ಕಣಕ್ಕಿಳಿಸಿತ್ತು. ಅನುಕಂಪ ವರ್ಕೌಟ್ ಆಗದೇ ಇಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅಶೋಕ್ ಮನಗೂಳಿ ಅವರ ವಿರುದ್ಧ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ತಂತ್ರ ಹೂಡಿ ರಮೇಶ್ ಭೂಸನೂರ್ ಅವರನ್ನು ಗೆಲ್ಲಿಸಿದ್ದರು. ಈಗ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮತ್ತೊಮ್ಮೆ ಸಿಂದಗಿ ಕ್ಷೇತ್ರ ಮತ ರಾಜಕೀಯಕ್ಕೆ ಸಿದ್ದವಾಗಿದೆ.
ಹಾಲಿ ಶಾಸಕ ಭೂಸನೂರ್ ಉತ್ತಮ ಜನಸಂಪರ್ಕ ಹೊಂದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಕೂಡ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೂಡ ಕ್ಷೇತ್ರದಲ್ಲಿ ಓಡಾಟ ಹೆಚ್ಚಿಸಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಿದೆ.
2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಮನಗೂಳಿ ಜಯಗಳಿಸಿದ್ದರು. ಕೋವಿಡ್ ವೇಳೆ ಅವರು ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಬಳಿಕ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಂಸಿ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದರು. ಆದರೆ, ಅನುಕಂಪದ ಅಲೆ ಏಳದೇ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಅವರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರು.
ಭೂಸನೂರ್ಗೆ ಟಿಕೆಟ್ ಘೋಷಣೆ:ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಮೇಶ್ ಭೂಸನೂರ್ಗೆ ಟಿಕೆಟ್ ಘೋಷಿಸಿದೆ. ಭೂಸನೂರ್ ಈಗಾಗಲೇ ಕ್ಷೇತ್ರದಲ್ಲಿ ಮತಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಇನ್ನೂ ಈ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 10 ಜನ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಅಶೋಕ್ ಮನಗೂಳಿ, ರಾಕೇಶ್ ಕಲ್ಲೂರ್, ವಿಠ್ಠಲ್ ಕೋಳೂರ್ ಹಾಗೂ ಚನ್ನಬಸಪ್ಪ ವಾರದ್ ಕೂಡಾ ಸೇರಿದ್ದಾರೆ.