ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಕರ್ನಾಟಕ ಹೆಬ್ಬಾಗಿಲು ಆಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನೂ ಅನುಭವಿಸುತ್ತಿದೆ. ಆದರೆ, ರಾಜ್ಯದ 52 ಕ್ಷೇತ್ರಗಳಲ್ಲಿ ಕೇಸರಿ ಪಡೆ ಎಷ್ಟೇ ಪ್ರಭಾವ ಬೀರಿದ್ದರೂ ಇದುವರೆಗೂ, ಈ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಆ ಎಲ್ಲ ಕ್ಷೇತ್ರಗಳ ಮಾಹಿತಿ ಇಲ್ಲಿದೆ..
ಪ್ರತಿ ಚುನಾವಣೆಯಲ್ಲಿ ಬಿಜೆಪಿ ತನಗೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳಲ್ಲಿ ಅನೇಕ ಕಾರ್ಯತಂತ್ರಗಳನ್ನು ಮಾಡುತ್ತಿದೆ. ಅದರಲ್ಲೂ, ಪ್ರತಿ ಬಾರಿ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆಲ್ಲಲೇಬೇಕೆಂದು ಕಮಲ ಪಕ್ಷ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದೆ. ಪಕ್ಷದ ಉನ್ನತ ಮಟ್ಟದ ನಾಯಕರ ವ್ಯಾಪಕ ಪ್ರವಾಸ, ನೆಲಮಟ್ಟದಲ್ಲಿ ಕೇಡರ್ ಬೇಸ್ ಬಲಪಡಿಸಲುವ ವಿಶೇಷ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಪಕ್ಷದಲ್ಲಿರುವ ಹೊಸ ಮುಖಗಳನ್ನು ಗುರುತಿಸುವುದು ಅಥವಾ ಹೊರಗಿನಿಂದ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸೇರಿದಂತೆ ವಿವಿಧ ರಣತಂತ್ರಗಳನ್ನು ಅಳವಡಿಸಿಕೊಂಡಿದೆ.
ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಪ್ರದೇಶದಲ್ಲಿ ಬಿಜೆಪಿಗೆ ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಬಹಳ ಹಿಂದಿನಿಂದಲೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿ ಜೆಡಿಎಸ್ ಪಕ್ಷ ತನ್ನ ನಾಯಕತ್ವ ಮತ್ತು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪ್ರಭಾವದಿಂದಾಗಿ ಸಾಂಪ್ರದಾಯಿಕವಾದ ಗಟ್ಟಿಯಾಗಿದೆ. ವಿಶೇಷವಾಗಿ ಪ್ರಬಲವಾದ ಒಕ್ಕಲಿಗ ಸಮುದಾಯ ಜೆಡಿಎಸ್ ಪರವಾಗಿದ್ದು, ಇದರಿಂದ ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ತನ್ನ ಹಿಡಿತ ಸಾಧಿಸುತ್ತಲೇ ಇದೆ. ಇಲ್ಲಿ ಕಾಂಗ್ರೆಸ್ ಮತ್ತೊಂದು ಪ್ರಮುಖ ಶಕ್ತಿಯಾಗಿದೆ.
ಈ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಸಹ ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿದಿದೆ. ಇದೇ ಭಾಗದಿಂದ ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕವು ಏಳು ಜಿಲ್ಲೆಗಳನ್ನು ಒಳಗೊಂಡಿದೆ. 2018ರ ಚುನಾವಣೆಯ ಸಮಯದಲ್ಲಿ ಆರು ಜಿಲ್ಲೆಗಳು ಇದ್ದು, ಈಗ ಹೊಸದಾಗಿ ವಿಜಯನಗರ ಜಿಲ್ಲೆ ರಚನೆಯಾಗಿದೆ. ಈ ಪ್ರದೇಶದ 40 ಕ್ಷೇತ್ರಗಳ ಫಲಿತಾಂಶಗಳ ವಿಶ್ಲೇಷಣೆ ಮಾಡಿದರೆ, ಇಲ್ಲಿ ಕಾಂಗ್ರೆಸ್ ಶೇ.50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 2008ರ ಚುನಾವಣೆಯಲ್ಲಿ ಗಳಿಸಿದ್ದ ಕೆಲ ಸ್ಥಾನಗಳನ್ನು ಸಹ ಬಿಜೆಪಿ ಕಳೆದೆರಡು ಚುನಾವಣೆಗಳಲ್ಲಿ ಕಳೆದುಕೊಂಡಿದೆ.
ಹಳೆ ಮೈಸೂರು ಮೇಲೆ ಕಣ್ಣು:ರಾಜ್ಯದಲ್ಲಿ ಬಿಜೆಪಿ ಇದುವರೆಗೂ ಬಹುಮತಕ್ಕೆ ಬೇಕಾದ 113 ಸ್ಥಾನಗಳ ಗುರಿಯನ್ನು ಎಂದಿಗೂ ಮುಟ್ಟಲಿಲ್ಲ. ಇತರ ಪ್ರದೇಶಗಳಂತೆ ಹಳೆಯ ಮೈಸೂರು ಪ್ರದೇಶದಲ್ಲಿ ಮಾತ್ರ ಉತ್ತಮ ಪ್ರದರ್ಶನ ತೋರಿದರೆ ಮಾತ್ರ ಆ ಗುರಿಯನ್ನು ತಲುಪಬಹುದು ಎಂಬುದು ಬಿಜೆಪಿಗೆ ಗೊತ್ತಾಗಿದೆ. ಇದೇ ಕಾರಣಕ್ಕಾಗಿಯೇ ಈ ಬಾರಿ ಹಳೇ ಮೈಸೂರು ಭಾಗದ ಮೇಲೆ ಬಿಜೆಪಿಯ ಕಣ್ಣು ಬಿದ್ದಿದ್ದು, ಇದಕ್ಕಾಗಿ ಎಲ್ಲ ರೀತಿಯ ಕಸರತ್ತು ಮಾಡುತ್ತಿದೆ.
ಬಿಜೆಪಿ ಎಂದಿಗೂ ಗೆಲ್ಲದ ಕ್ಷೇತ್ರಗಳು:
- ಅಫಜಲಪುರ: ಕಲ್ಯಾಣ ಕರ್ನಾಟಕದ ಭಾಗದ ಅಫಜಲಪುರ ಕ್ಷೇತ್ರವು ಕಲಬುರಗಿ ಜಿಲ್ಲೆಯಲ್ಲಿದೆ. 1957ರಿಂದ ಕಾಂಗ್ರೆಸ್ ಒಂಬತ್ತು ಬಾರಿ ಗೆದ್ದಿದೆ. ಬಿಜೆಪಿ 1994ರಿಂದ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಈ ಕ್ಷೇತ್ರದಲ್ಲಿ ಗೆಲ್ಲಲು ವಿಫಲವಾಗಿದೆ. 2008 ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. 2013ರಲ್ಲಿ ಬಿಜೆಪಿ 5ನೇ ಸ್ಥಾನಕ್ಕೆ ಕುಸಿದಿತ್ತು.
- ಬಾಗೇಪಲ್ಲಿ: ಈ ಕ್ಷೇತ್ರವು ಹಳೆ ಮೈಸೂರು ಪ್ರಾಂತ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಡುವಿನ ಕಾದಾಟಕ್ಕೆ ಸಾಕ್ಷಿಯಾಗಿರುವ ಏಕೈಕ ಕ್ಷೇತ್ರ ಇದಾಗಿದೆ. ಇಲ್ಲಿ ಬಿಜೆಪಿಗೆ ಗೆಲ್ಲುವುದು ಅಷ್ಟೇ ಅಲ್ಲ, ಎರಡನೇ ಸ್ಥಾನಕ್ಕೆ ಬರಲೂ ಸಾಧ್ಯವಾಗಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.2.52 ಮತ ಗಳಿಸಿತ್ತು. 2008ರಲ್ಲಿ ಮಾತ್ರ ಶೇ.20.90 ಮತಗಳೊಂದಿಗೆ 4ನೇ ಸ್ಥಾನ ಪಡೆದು ಗಮನ ಸೆಳೆದಿತ್ತು
- ಭದ್ರಾವತಿ: ಈ ಕ್ಷೇತ್ರವು ಮಧ್ಯ ಕರ್ನಾಟಕ ಪ್ರದೇಶದ ಶಿವಮೊಗ್ಗ ಜಿಲ್ಲೆಯಲ್ಲಿದೆ. 1962ರಲ್ಲಿ ಜನ ಸಂಘ ಚುನಾವಣೆಯಲ್ಲಿ ಸ್ಪರ್ಧಿಸಿ 3ನೇ ಸ್ಥಾನವನ್ನು ಗಳಿಸಿತ್ತು. 1972ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಎಸ್ (ಭಾರತೀಯ ಜನ ಸಂಘ) ಮೂರನೇ ಸ್ಥಾನದಲ್ಲಿತ್ತು. 1983ರಿಂದ ಈ ಕ್ಷೇತ್ರದಿಂದ ಬಿಜೆಪಿ ಒಂದೇ ಒಂದು ಬಾರಿ ಗೆದ್ದಿಲ್ಲ.
- ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲೂ ಇಲ್ಲಿಯವರೆಗೆ ಬಿಜೆಪಿ ಒಂದು ಬಾರಿಯೂ ಗೆದ್ದಿಲ್ಲ. ಸಿಪಿ ಯೋಗೇಶ್ವರ್ ಈ ಕ್ಷೇತ್ರದಿಂದ 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ, 2004 ಮತ್ತು 2008ರಲ್ಲಿ ಕಾಂಗ್ರೆಸ್ ಮತ್ತು 2013ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದರು. ಬಿಜೆಪಿಗೆ ಸೇರ್ಪಡೆಗೊಂಡಿರುವ ಯೋಗೇಶ್ವರ್, 2018ರಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ 21,530 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ.
- ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಚಿಂತಾಮಣಿಯಲ್ಲೂ ಬಿಜೆಪಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ. 2004ರ ವಿಧಾನಸಭಾ ಚುನಾವಣೆಯಲ್ಲಿ ಶೇ.44.81ರಷ್ಟು ಮತಗಳೊಂದಿಗೆ ಬಿಜೆಪಿಗೆ 2ನೇ ಸ್ಥಾನ ಪಡೆಯಲು ಸಫಲವಾಗಿತ್ತು.
- ದೇವನಹಳ್ಳಿ: ಹಳೆ ಮೈಸೂರು ಭಾಗವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ದೇವನಹಳ್ಳಿ ಬರುತ್ತದೆ. ಇಲ್ಲಿ ಬಿಜೆಪಿ 1994, 2008, 2013 ಮತ್ತು 2018ರಲ್ಲಿ ಸ್ಪರ್ಧಿಸಿದ್ದರೂ ಎರಡನೇ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು.
- ಗಾಂಧಿನಗರ: ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ಕ್ಷೇತ್ರದಲ್ಲಿ 1967ರಿಂದ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಕಾಂಗ್ರೆಸ್ ಇಲ್ಲಿ ಎಂಟು ಬಾರಿ ಗೆದ್ದಿದೆ.
- ಗೌರಿಬಿದನೂರು: ಚಿಕ್ಕಬಳಾಪುರ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. 1994ರಲ್ಲಿ ಬಿಜೆಪಿ ಕೇವಲ ಶೇ.5.44ರಷ್ಟು ಮತಗಳನ್ನು ಗಳಿಸಿತ್ತು. 2008ರಿಂದ ಪಕ್ಷದ ಬಲವಾಗಿತ್ತಿದೆ. ಆದರೆ, ಗೆಲ್ಲಲು ವಿಫಲವಾಗಿದೆ.
- ಗುಬ್ಬಿ: ಹಳೇ ಮೈಸೂರು ಪ್ರದೇಶದ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 2008 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದಿತ್ತು. 2018 ರಲ್ಲಿ ಬಿಜೆಪಿಯನ್ನು ಶೇ.5.86ರಷ್ಟು ಮತಗಳ ಕಡಿಮೆ ಅಂತರದಿಂದ ಕಾಂಗ್ರೆಸ್ ಸೋಲಿಸಿತ್ತು.
- ಗುರುಮಿಟ್ಕಲ್: ಕಲ್ಯಾಣ ಕರ್ನಾಟಕ ಪ್ರದೇಶದ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಬಲ ಹಿಡಿತವಾಗಿದೆ. ಇಲ್ಲಿ ಬಿಜೆಪಿ ಎಂದಿಗೂ ಬಹುಮತ ಪಡೆದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 1972ರಿಂದ 2004 ರವರೆಗೆ ಇದೇ ಕ್ಷೇತ್ರದಿಂದ ಗೆದ್ದು ಪ್ರತಿನಿಧಿಸಿದ್ದರು.
- ಹಳಿಯಾಳ:ಹಳಿಯಾಳ ವಿಧಾನಸಭೆಯು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಇದು ಕಿತ್ತೂರು ಕರ್ನಾಟಕ ಪ್ರದೇಶದ ಒಂದು ಭಾಗವಾಗಿದ್ದು, ಈ ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರನ್ನು ಶೇ.3.91ರಷ್ಟು ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ ಸೋಲಿಸಿದ್ದರು.
- ಹನೂರು: ಹಳೆ ಮೈಸೂರು ಪ್ರಾಂತ್ಯದ ಚಾಮರಾಜನಗರ ಜಿಲ್ಲೆಯ ಹನೂರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. 2018ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಶೇ.33.69ರಷ್ಟು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಗಳಿಸಿತ್ತು.
- ಹೆಚ್‌ಡಿ ಕೋಟೆ: ಮೈಸೂರು ಜಿಲ್ಲೆಯಲ್ಲಿ ಹೆಗ್ಗಡದೇವನಕೋಟೆ (ಹೆಚ್‌ಡಿ ಕೋಟೆ) ಕ್ಷೇತ್ರದಲ್ಲಿ 1967ರಿಂದ ಇಲ್ಲಿಯವರೆಗೆ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. 2004 ಮತ್ತು 2008ರ ಚುನಾವಣೆಯಲ್ಲಿ ಮಾತ್ರ ಎರಡನೇ ಸ್ಥಾನ ಪಡೆದಿತ್ತು.
- ಹೊಳೆನರಸೀಪುರ:ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದೆ. ಈ ಕ್ಷೇತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪ್ರತಿನಿಧಿಸುತ್ತಿದ್ದರು. ಈಗ ಅವರ ಪುತ್ರ ಎಚ್.ಡಿ. ರೇವಣ್ಣ ಪ್ರತಿನಿಧಿಸುತ್ತಿದ್ದಾರೆ.
- ಕನಕಪುರ: ಹಳೆ ಮೈಸೂರು ಭಾಗದ ರಾಮನಗರ ಜಿಲ್ಲೆಯ ಕನಕಪುರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಈ ಬಾರಿ ಬಿಜೆಪಿ ಮುಖಂಡ, ಸಚಿವ ಆರ್.ಅಶೋಕ್ ಕಣಕ್ಕಿಳಿದಿದ್ದಾರೆ.
- ಕೋಲಾರ: ಹಳೆಯ ಮೈಸೂರು ಪ್ರದೇಶದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 1987ರಿಂದ ಬಿಜೆಪಿ ಗೆಲುವು ಸಾಧಿಸುವಲ್ಲಿ ಸಾಧ್ಯವಾಗಿಲ್ಲ.
- ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಿಜೆಪಿ ಪ್ರತಿ ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
- ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಕರಡಿ ಸಂಗಣ್ಣ 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. ನಂತರ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.
- ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಬಿಜೆಪಿಗೆ ಎರಡನೇ ಸ್ಥಾನ ಪಡೆಯಲು ಕೂಡ ಇದುವರೆಗೆ ಆಗಿಲ್ಲ.
- ಕೃಷ್ಣರಾಜನಗರ: ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಕ್ಷೇತ್ರವು ಜೆಡಿಎಸ್, ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.
- ಕುಣಿಗಲ್: ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರವು ಕಾಂಗ್ರೆಸ್, ಜೆಡಿಎಸ್ ಕಾದಾಟಕ್ಕೆ ಕಾರಣವಾಗಿದೆ. ಈಗ ಬಿಜೆಪಿ ಸಹ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ತ್ರಿಕೋನ ಸ್ಪರ್ಧೆಯನ್ನು ಹೊಂದಿದೆ. 2008ರಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.
- ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಮೊದಲಿನಿಂದಲೂ ತನ್ನ ಖಾತೆಯನ್ನು ತೆರೆದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿತ್ತು.
- ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 1994ರಿಂದ ಬಿಜೆಪಿ ಸ್ಪರ್ಧಿಸುತ್ತಿದ್ದು ಇಲ್ಲಿ ಎರಡನೇ ಸ್ಥಾನವನ್ನೂ ತಲುಪಲು ಸಹ ಸಾಧ್ಯವಾಗಿಲ್ಲ.
- ಮಳವಳ್ಳಿ: ಹಳೇ ಮೈಸೂರು ಪ್ರದೇಶದ ಭಾಗವಾಗಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದಲ್ಲೂ ಬಿಜೆಪಿ ಖಾತೆ ತೆರೆದಿಲ್ಲ.
- ಮಂಡ್ಯ:ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಈಗ ಜಿಲ್ಲೆಯಲ್ಲಿ ನೆಲೆಯೂರಲು ಎಲ್ಲ ರೀತಿಯ ಪ್ರಯತ್ನಗಳನ್ನು ಬಿಜೆಪಿ ನಡೆಸುತ್ತಿದೆ. ಮಂಡ್ಯ ಸ್ವತಂತ್ರ ಸಂಸದೆ ಹಾಗೂ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಈ ಬಾರಿ ಬಿಜೆಪಿಗೆ ಬೆಂಬಲ ನೀಡಿದ್ದು, ಇಲ್ಲಿ ಸ್ಪರ್ಧೆ ಕುತೂಹಲ ಮೂಡಿಸಿದೆ.
- ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಿಡಿತ ಹೊಂದಿದೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2004, 2008, 20013, 2018ರ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದಾರೆ.
- ಚಾಮುಂಡೇಶ್ವರಿ: ಹಳೆ ಮೈಸೂರು ಪ್ರದೇಶದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ಹಿಡಿತ ಹೊಂದಿದ್ದಾರೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದರು. ಆದರೆ, ಜಿಟಿ ದೇವೇಗೌಡ ವಿರುದ್ಧ 36,042 ಮತಗಳ ಅಂತರದಿಂದ ಸೋತಿದ್ದರು. ಬಿಜೆಪಿ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.
- ಇತರ ಕ್ಷೇತ್ರಗಳು: ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು, ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ಮಂಡ್ಯ ಜಿಲ್ಲೆಯ ನಾಗಮಂಗಲ, ಶ್ರೀರಂಗಪಟ್ಟಣ, ತುಮಕೂರು ಜಿಲ್ಲೆಯ ಪಾವಗಡ, ಸಂಡೂರು, ಯಾದಗಿರಿ ಜಿಲ್ಲೆಯ ಶಹಾಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಸಿಡ್ಲಘಟ್ಟ, ಹಾಸನ ಜಿಲ್ಲೆಯ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಇಂದಿಗೂ ಬಿಜೆಪಿ ಗೆಲುವು ಕಂಡಿಲ್ಲ.