ಬೆಳಗಾವಿ: ರಾಮದುರ್ಗ ಕ್ಷೇತ್ರ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಸದ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಕ್ಷೇತ್ರದಲ್ಲಿ ಮತ್ತೆ ಪಾರುಪತ್ಯ ಮುಂದುವರಿಸಲು ಅಶೋಕ ಪಟ್ಟಣ ಕಸರತ್ತು ನಡೆಸಿದ್ದರೆ, ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಚಿಕ್ಕರೇವಣ್ಣ ಸ್ಪರ್ಧೆಗೆ ಅಣಿಯಾಗಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ವಂಚಿತ ಮಹಾದೇವಪ್ಪ ಯಾದವಾಡ ನಡೆ ನಿಗೂಢವಾಗಿದೆ. ಸದ್ಯ ಕ್ಷೇತ್ರದಲ್ಲಿ ಅಶೋಕ ಪಟ್ಟಣ ವರ್ಸಸ್ ಚಿಕ್ಕರೇವಣ್ಣ ಎಂಬ ಸ್ಥಿತಿಯಿದ್ದು, ಹೇಗಾದರೂ ಮಾಡಿ ಕ್ಷೇತ್ರವನ್ನು ಮತ್ತೆ ಕಮಲದ ತೆಕ್ಕೆಗೆ ತೆಗೆದುಕೊಳ್ಳಲು ಕೇಸರಿ ಕಲಿಗಳು ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ, ಇದಕ್ಕೆ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅಡ್ಡಗಾಲು ಹಾಕಿದ್ದು, ಸ್ವತಂತ್ರವಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.
ಬಿಜೆಪಿ ಘಟಾನುಘಟಿಗಳಿಗೆ ಚಿಕ್ಕರೇವಣ್ಣ ಟಕ್ಕರ್:ಬೆಂಗಳೂರು ಮೂಲದ ಚಿಕ್ಕರೇವಣ್ಣ ಸಚಿವ ಎಂಟಿಬಿ ನಾಗರಾಜ ಸಂಬಂಧಿಯಾಗಿದ್ದು, ಮೂರನಾಲ್ಕು ವರ್ಷಗಳ ಹಿಂದೆಯಷ್ಟೇ ರಾಮದುರ್ಗಕ್ಕೆ ಬಂದು ನೆಲೆಸಿದ್ದರು. ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ಚಿಕ್ಕರೇವಣ್ಣ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೇವಲ 10 ದಿನಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಹಿಡಿದು ಏಳು ಜನ ಆಕಾಂಕ್ಷಿಗಳನ್ನು ಬದಿಗೊತ್ತಿ ಚಿಕ್ಕರೇವಣ್ಣಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ದು, ಇಡೀ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಮೂಲ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನೂ ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಮಹಾದೇವಪ್ಪ ಯಾದವಾಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಉರುಳಾಗುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ಇಲ್ಲಿನ ರಾಜಕೀಯ ಚಿಂತಕರು.
ಕ್ಷೇತ್ರದ ಹಿನ್ನೆಲೆ:ರಾಮದುರ್ಗ ಕ್ಷೇತ್ರದಲ್ಲಿ 1951ರಿಂದ ಈವರೆಗೆ ನಡೆದ ಒಟ್ಟು 15 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ತಲಾ ಎರಡು ಬಾರಿ ಜನತಾ ಪಕ್ಷ, ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಒಂದು ಬಾರಿ ಲೋಕಸೇವಾ ಸಂಘ ವಿಜಯಶಾಲಿ ಆಗಿದೆ.
ಮತದಾರರ ವಿವರ:1,02,690 ಪುರುಷ ಮತದಾರರಿದ್ದು, 99,202 ಮಹಿಳಾ ಮತದಾರರು, 9 ಇತರೆ ಮತದಾರರು ಸೇರಿ ಒಟ್ಟು 2,01,901 ಮತದಾರರಿದ್ದಾರೆ. ಅತೀ ಹೆಚ್ಚು ಲಿಂಗಾಯತ ಮತದಾರರಿದ್ದು, ನಂತರದಲ್ಲಿ ಕುರುಬರು, ಲಂಬಾಣಿ, ಎಸ್ಸಿ-ಎಸ್ಟಿ, ಮುಸ್ಲಿಂದ ಮತದಾರರು ಸೇರಿ ಇನ್ನುಳಿದ ಸಮಾಜಗಳ ಮತದಾರರಿದ್ದಾರೆ.
ಕ್ಷೇತ್ರದ ವಿಶೇಷತೆ:ಶ್ರೀರಾಮಚಂದ್ರ ಶಬರಿಯನ್ನು ಭೇಟಿಯಾದ ಐತಿಹಾಸಿಕ ಸ್ಥಳ ಇಲ್ಲಿದ್ದು, ಶಬರಿ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಉತ್ತರಕರ್ನಾಟಕದ ಜಾಗೃತ ಸ್ಥಳ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ತೋರಗಲ್ಲ ಏಳು ಸುತ್ತಿನ ಕೋಟೆ, ಎತ್ತರದ ಶಿವನ ಮೂರ್ತಿ ಇರುವುದು ಕೂಡ ರಾಮದುರ್ಗ ಕ್ಷೇತ್ರದಲ್ಲಿ. ಪೇಶ್ವೆಯ ಮಹಾರಾಜರು, ಭಾವೆ ರಾಜ ಮನೆತನ, ತೋರಗಲ್ಲ ಶಿಂಧೆ ಮನೆತನ ರಾಮದುರ್ಗ ತಾಲೂಕಿನಲ್ಲಿ ಆಡಳಿತ ನಡೆಸಿವೆ. 1939ರಲ್ಲಿ ರಾಮದುರ್ಗದಲ್ಲಿ ಅತೀ ಹೆಚ್ಚು ಕರ ತುಂಬುವಂತೆ ಆದೇಶ ಹೊರಡಿಸಿದ ಹಿನ್ನೆಲೆ ಕರನಿರಾಕರಣೆ ಚಳುವಳಿ ಮಾಡಿದ ಪ್ರಜೆಗಳು ಭಾವೆ ಮಹಾರಾಜನನ್ನು ರಾಮದುರ್ಗದಿಂದ ಓಡಿಸಿದ್ದು ಇತಿಹಾಸ.