ಮೈಸೂರು: ನಾಯಕ ಸಮುದಾಯದ ನಾಯಕರಿಗೆ ಮೀಸಲಾದ ಜಿಲ್ಲೆಯ ಹೆಚ್.ಡಿ.ಕೋಟೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದ್ದು ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ, ಈ ಕ್ಷೇತ್ರದಲ್ಲಿ ನೆಲೆಯೂರಲು ಬಿಜೆಪಿಗೆ ಸಾಧ್ಯವೇ ಅನ್ನೋದನ್ನು ಕಾದುನೋಡಬೇಲು. ಇನ್ನು ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಗೆದ್ದ ಇತಿಹಾಸ ಇಲ್ಲ. ಹಾಗಾಗಿ ಈ ಕ್ಷೇತ್ರ ಇಂದಿಗೂ ಸಹ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದೇ ಲೆಕ್ಕಾಚಾರದಲ್ಲಿರುವ ಬಿಜೆಪಿ, ಈ ಬಾರಿ ಅಚ್ಚರಿಯ ಫಲಿತಾಂಶವನ್ನು ಕೊಡಬಲ್ಲದು ಎಂಬ ಲೆಕ್ಕಾಚಾರ ಕೂಡ ಇದೆ.
ಹೆಚ್.ಡಿ.ಕೋಟೆ ವನಸಿರಿ ನಾಡು, ಹುಲಿಗಳ ನಾಡು ಎಂಬ ಖ್ಯಾತಿ ಮಾತ್ರವಲ್ಲದೆ, ರಾಜ್ಯದ ಅತಿ ಹೆಚ್ಚು ಹಿಂದುಳಿದವರ ಕ್ಷೇತ್ರದಲ್ಲಿ ಒಂದೆನಿಸಿಕೊಂಡಿದೆ. ಸದ್ಯ ಕ್ಷೇತ್ರದಲ್ಲಿ ಚುನಾವಣಾ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಕೋಟೆಯ ನಾಯಕರು ಯಾರಾಗ್ತಾರೆ ಎಂಬ ಕದನ ಕೂತೂಹಲವೂ ಮುಂದುವರೆದಿದೆ. ಈ ಮೊದಲೇ ಹೇಳಿದಂತೆ ಕ್ಷೇತ್ರದಲ್ಲಿ ಒಮ್ಮೆ ಆಯ್ಕೆಯಾದವರೂ ಮತ್ತೊಮ್ಮೆ ಆಯ್ಕೆಯಾದ ಉದಾಹರಣೆ ಇಲ್ಲ. ಹಾಗೊಮ್ಮೆ ಆಯ್ಕೆಯಾಗಿದ್ದರೂ ಎರಡನೇ ಬಾರಿಗೆ ಅದೇ ಪಕ್ಷದಲ್ಲಿ ಇದುವರೆವಿಗೂ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಹಾಲಿ ಶಾಸಕರೂ ಆಗಿರುವ ಕಾಂಗ್ರೆಸ್ನ ಅನಿಲ್ ಚಿಕ್ಕಮಾದು ಮತ್ತೊಮ್ಮೆ ಗೆದ್ದರೆ ಇತಿಹಾಸ. ಆದರೆ, ಜೆಡಿಎಸ್ ಪಕ್ಷ ಕ್ಷೇತ್ರವನ್ನು ಅಷ್ಟು ಸುಲಭವಾಗಿ ಕೈಬಿಡುವುದು ಅನುಮಾನ. ಹಾಗಾಗಿ ಈಗಿನಿಂದಲೇ ಕ್ಷೇತ್ರದ ಹಿಡಿತಕ್ಕೆ ಮುಂದಾಗಿದ್ದರಿಂದ ಹೆಚ್.ಡಿ.ಕೋಟೆ ಕೈ-ತೆನೆ ನೇರ ಹಣಾಹಣಿ ಸಾಕ್ಷಿಯಾಗಲಿದೆ.
15 ಬಾರಿ ಚುನಾವಣೆ ನಡೆದ ಕ್ಷೇತ್ರ:1952ರ ಮೊದಲ ಚುನಾವಣೆಯಲ್ಲಿ ಗುಂಡ್ಲುಪೇಟೆ ದ್ವಿಸದಸ್ಯ ಕ್ಷೇತ್ರಕ್ಕೆ ಹಾಗೂ 1957ರಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರಕ್ಕೂ ಸೇರಿದ್ದ ಜಿಲ್ಲೆಯ ಹೆಗ್ಗಡದೇವನಕೋಟೆ (ಹೆಚ್.ಡಿ.ಕೋಟೆ) ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಹಾಗೂ 1962ರಲ್ಲಿ ಪ್ರತ್ಯೇಕವಾಯಿತಲ್ಲದೆ ಅಂದೇ ಮೀಸಲು ಕ್ಷೇತ್ರವಾಗಿದ್ದು ಕ್ಷೇತ್ರದ ಇತಿಹಾಸ. ಏಕ ಸದಸ್ಯ ಕ್ಷೇತ್ರವಾದ ಬಳಿಕ 13 ಬಾರಿ ಚುನಾವಣೆ ನಡೆದಿದೆ. ಇನ್ನೂ ಕಬಿನಿ, ನುಗು, ತಾರಕ, ಹೆಬ್ಬಾಳದಂತಹ ನಾಲ್ಕು ಜಲಾಶಯ, ಬಂಡಿಪುರ, ನಾಗರಹೊಳೆಯಂತಹ ಅಂತಾರಾಷ್ಟ್ರೀಯ ಅಭಯಾರಣ್ಯಗಳಿದ್ದರೂ ಕುಡಿಯುವ ನೀರಿನ ಸಮಸ್ಯೆ ಸೇರಿ ನಾನಾ ಸಮಸ್ಯೆಗಳು ಇಂದಿಗೂ ಜೀವಂತ ಇವೆ. ಇದೆಲ್ಲವನ್ನೂ ಮೀರಿಯೂ ಕಾಡಂಚಿನ ಜನರ ಸಮಸ್ಯೆಗೆ ಇದುವರೆವಿಗೂ ನ್ಯಾಯಯುತ ಪರಿಹಾರ ಒದಗಿಸುವಲ್ಲಿ ಎಲ್ಲಾ ಸರ್ಕಾರ ವಿಫಲವಾಗಿವೆ.
ಕ್ಷೇತ್ರದ ಜಾತಿ ಪ್ರಾಬಲ್ಯ: ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತದಾರ ನಿರ್ಣಾಯಕ. ಅವರೊಂದಿಗೆ ಲಿಂಗಾಯತ, ಒಕ್ಕಲಿಗ, ಕುರುಬ ಮತ್ತು ಮುಸ್ಲಿಂ ಮತದಾರರು ಕೂಡ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮೈಸೂರು ಒಡೆಯರ ಅರಸರ ಕಾಲದಲ್ಲಿ ಹೆಗ್ಗಡದೇವ ಎಂಬಾತ ಈ ಭಾಗದ ಕಾಕನಕೋಟೆಯಲ್ಲಿ ಆನೆಗಳನ್ನು ಖೆಡ್ಡಾಗೆ ಕೆಡುವುತ್ತಿದ್ದ. ಹಾಗಾಗಿ ಈ ಹೆಸರು ಚಾಲ್ತಿಗೆ ಬಂದಿತು ಅನ್ನೋದು ಇತಿಹಾಸ. ಅಂತಹ ಭಾಗದಲ್ಲಿ ಈಗ ರಾಜಕೀಯ ಹಾಸುಹೊಕ್ಕಿದೆ. ಪಕ್ಷೇತರ ಅಭ್ಯರ್ಥಿಗಳಾಗಿ ಎನ್.ದೇವದತ್ತ, ಸ್ವಯಂ ನಿವೃತ್ತ ಎಎಸ್ಐ ಎಸ್.ದೊರೆಸ್ವಾಮಿ ಸೇರಿದಂತೆ ಬಿಎಸ್‌ಪಿ, ಎಎಪಿ ಪಕ್ಷ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಪ್ರಮುಖ ನಾಯಕರ ಪ್ರಾಬಲ್ಯ:ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಸಚಿವ ಶ್ರೀರಾಮುಲು ಅವರ ಪ್ರಭಾವವೂ ಈ ಭಾಗದಲ್ಲಿ ಹೆಚ್ಚಾಗಿದೆ. ಹೀಗಾಗಿ ಕದನ ಕಾಳಗಕ್ಕೆ ಮಹಾ ಅತಿರಥ ನಾಯಕರೇ ಇಳಿಯಲಿದ್ದಾರೆ. ಮಾತ್ರವಲ್ಲದೆ, ಎಸ್ಟಿ ಮೀಸಲಾತಿ ಹೋರಾಟದಲ್ಲಿ ಚಿಕ್ಕಮಾದು, ಚಿಕ್ಕಣ್ಣ, ಸಿದ್ದರಾಜು ಅವರ ಪಾತ್ರವೂ ಬಹಳ ಪ್ರಮುಖವಾಗಿದೆ. ಜತೆಗೆ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಪ್ರಾಬಲ್ಯವುಳ್ಳ ಕ್ಷೇತ್ರವೂ ಇದಾಗಿದೆ. ಈಗಾಗಲೇ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರು ಚಿಕ್ಕಣ್ಣ ಪುತ್ರ ಜಯಪ್ರಕಾಶ್ಗೆ ಜೆಡಿಎಸ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.
ಇತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಕೃಷ್ಣನಾಯಕ ತಮಗೆ ಟಿಕೆಟ್ ನೀಡುವಂತೆ ಬೇಡಿಕೆ ಸಹ ಇಟ್ಟಿದ್ದಾರೆ. ಆದರೆ, ಈ ಭಾಗದ ನಾಯಕರ ಸಮುದಾಯದ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ಕುಟುಂಬದವರಿಗೆ ಟಿಕೆಟ್ ನೀಡದಿದ್ದರೆ ಇತರೆ ಕ್ಷೇತ್ರಗಳಲ್ಲಿಯೂ ಅದರ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಸ್ಥಳೀಯ ಜೆಡಿಎಸ್ ಶಾಸಕರೆಲ್ಲರೂ ಜಯಪ್ರಕಾಶ್ ಅವರ ಹೆಸರನ್ನೇ ಸೂಚಿಸಿದ್ದಾರೆ.