ಬೆಂಗಳೂರು : ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಕಳೆದ ನವೆಂಬರ್ 18 ರಂದು ಆರಂಭವಾದ ಜೆಡಿಎಸ್ ನ ಮಹಾತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಮಾರ್ಚ್ 26ಕ್ಕೆ ಕೊನೆಗೊಂಡಿದ್ದು, ಮೈಸೂರಿನಲ್ಲಿ ಅದ್ಧೂರಿಯಾಗಿ ಭಾನುವಾರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಸಹ ನಡೆಸಲಾಯಿತು. ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವಷ್ಟರಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ದಳಪತಿಗಳು ಯಶಸ್ವಿಗೊಳಿಸಿದ್ದಾರೆ. ಯಾತ್ರೆ ಹೋದ ಕಡೆಯಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತಷ್ಟು ಉತ್ಸುಕರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಪಂಚರತ್ನ ರಥಯಾತ್ರೆ ಸಮಾರೋಪ ನಡೆದಿದ್ದರೂ, ನಿಗದಿಯಾಗಿರುವ ರಥಯಾತ್ರೆ ಕಾರ್ಯಕ್ರಮಗಳನ್ನು ಮುಂದುವರಿಸಲು ಕುಮಾರಸ್ವಾಮಿ ಅವರು ತೀರ್ಮಾನಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನ.18 ರಂದು ಪಂಚರತ್ನ ರಥಯಾತ್ರೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚಾಲನೆ ನೀಡಿದ್ದರು. ರಾಜ್ಯದ ಬಹುತೇಕ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ ರಥಯಾತ್ರೆಗೆ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು.
ಜೆಡಿಎಸ್ ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲೂ ಯಾತ್ರೆ ನಡೆಸಿದ್ದ ದಳಪತಿಗಳು, ನಿನ್ನೆ ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭದಲ್ಲೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಭಾಗಿಯಾಗಿ ಯಾತ್ರೆಯನ್ನು ಕೊನೆಗೊಳಿಸಿದರು. ಕಾಲಿನ ಊತ ಇರುವ ಕಾರಣ ಹಾಗೂ ಮಂಡಿನೋವಿನಿಂದ ಬಳಲುತ್ತಿರುವ ಗೌಡರನ್ನು ಟ್ರಾಲಿ ಮೂಲಕ ಜನರ ಬಳಿ ಕರೆದೊಯ್ದಿದ್ದರು ವಿಶೇಷವಾಗಿತ್ತು. ಬಾವುಕ ನುಡಿಗಳನ್ನಾಡಿದ ದೇವೇಗೌಡರು, ನಮಗೆ ಬಹುಮತ ಕೊಡಿ ಎಂದು ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರ ಕಡೆ ಕೈಮುಗಿದರು.
ಗೌಡರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಅವರಷ್ಟೇ ಸಾಥ್ ನೀಡಿದ್ದು ಮತ್ತಷ್ಟು ಮೆರಗು ತಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಕಾರಣದಿಂದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದಿರುವ ಜೆಡಿಎಸ್, ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡಲು ದಳಪತಿಗಳು ತಯಾರಿ ನಡೆಸಿದ್ದಾರೆ.
ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಅಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇನ್ನು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿಲ್ಲ. ಹಾಗಾಗಿ, ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ ನಂತರ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡುವ ಲೆಕ್ಕಾಚಾರವೂ ನಡೆಯುತ್ತಿದೆ. ಕಾಂಗ್ರೆಸ್-ಹಾಗೂ ಬಿಜೆಪಿಯಲ್ಲಿ ಟಿಕೆಟ್ ವಂಚಿತರನ್ನು ಸೆಳೆಯುವ ದಾಳವನ್ನು ಉರುಳಿಸಲು ದಳಪತಿಗಳು ಚಿಂತನೆ ನಡೆಸಿದ್ದಾರೆ.