ಗದಗ: ಬಂಡಾಯದ ನೆಲ ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮತಕ್ಷೇತ್ರ ಕೂಡ ಒಂದು. ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಸ್ಥಳೀಯ ಪಕ್ಷಗಳು ಅಳೆದು ತೂಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಿರುಸಿನ ಪ್ರಚಾರ ಕೂಡ ನಡೆಸಿದ್ದಾರೆ. ಹಾಗಾಗಿ ಕ್ಷೇತ್ರ ರಾಜಕೀಯ ರಂಗು ಪಡೆದಿದೆ.
ಕಿತ್ತೂರು-ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಡುವ ಈ ಕ್ಷೇತ್ರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಒಂದು ಭಾಗ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಿಸಿ ಪಾಟೀಲ್, ಮತ್ತೆ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ. ಇವರಿಗೆ ಪ್ರತಿರೋಧ ನೀಡಲು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಪ್ರತಿ ತಂತ್ರ ರೂಪಿಸಿದೆ. ಕಳೆದ ಬಾರಿ 73,045 ಮತ ಪಡೆದು ಗೆಲವು ಸಾಧಿಸಿದ ಸಿಸಿ ಪಾಟೀಲ್, ಲೋಕೋಪಯೋಗಿ ಸಚಿವರೂ ಆದರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಸಿಸಿ ಪಾಟೀಲ್ಗೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಈ ಬಾರಿ ಗೆಲವು ಅಷ್ಟು ಸುಲಭದ ಮಾತಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ರಾಜಕೀಯ ಪಕ್ಷಗಳ ಬಲಾಬಲ: ಬಿಜೆಪಿಯಿಂದ ಸಿಸಿ ಪಾಟೀಲ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದು ಪ್ರಚಾರ ಕೂಡ ನಡೆಸಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದ ಕಾಂಗ್ರೆಸ್ನ ಹುರಿಯಾಳು ಬಿಆರ್ ಯಾವಗಲ್ ಮತ್ತೆ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ. ಆಪ್ ಪಕ್ಷದಿಂದ ರಾಮಪ್ಪ ದ್ಯಾಮಪ್ಪ ಹೊನ್ನವರ ಕಣಕ್ಕಿಳಿದರೆ, ಜೆಡಿಎಸ್ ಕಾದು ನೋಡುವ ತಂತ್ರ ರೂಪಿಸಿದೆ. ಹಾಗಾಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷದ ಮುಖಂಡರು ಈಗಾಗಲೇ ಭರ್ಜರಿ ಪ್ರಚಾರ ಕೂಡ ಆರಂಭಿಸಿದ್ದಾರೆ. ಸಿಸಿ ಪಾಟೀಲ್ ಸಚಿವರಾಗಿ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರೆ ಎದುರಾಳಿ ಬಿಆರ್ ಯಾವಗಲ್ ತಮ್ಮದೇಯಾದ ಮತದಾರರ ಸಂಖ್ಯಾಬಲ ಹೊಂದಿದವರು. ಇಬ್ಬರು ಸಮಬಲದ ಅಭ್ಯರ್ಥಿಗಳಾಗಿದ್ದರಿಂದ ಈ ಬಾರಿ ಜಿದ್ದಾಜಿದ್ದಿ ಹೋರಾಟ ನಡೆಯುವುದು ನಿಚ್ಚಳ ಎನ್ನುತ್ತಿದ್ದಾರೆ ರಾಜಕೀಯ ಚಿಂತಕರು.
ಕ್ಷೇತ್ರದ ವೈಶಿಷ್ಟ್ಯ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಕಾಲ ಅಧಿಕಾರ ನಡೆಸಿತಾದರೂ ಸದ್ಯ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 1957ರಿಂದ ಈವರೆಗೆ ನಡೆದು ಒಟ್ಟು ಚುನಾವಣೆಯಲ್ಲಿ INC/INC(I) 8 ಬಾರಿ, ಬಿಜೆಪಿ 3 ಬಾರಿ, JNP 2 ಬಾರಿ, JD 1 ಬಾರಿ ಗೆಲುವು ಕಂಡಿದೆ. ಬಿ ಆರ್ ಯಾವಗಲ್ ನಾಲ್ಕು ಬಾರಿ ಗೆಲುವು ಕಂಡಿದ್ದು ಐದನೇ ಬಾರಿಯ ಅದೃಷ್ಟಕ್ಕಾಗಿ ಕಾದು ಕುಳಿತಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ ಮೂರು ಬಾರಿ ಗೆದ್ದಿದ್ದು ಇದೀಗ ನಾಲ್ಕನೆ ಬಾರಿಯ ಅದೃಷ್ಟಕ್ಕಾಗಿ ಕಣಕ್ಕಿಳಿದಿದ್ದಾರೆ.
ಕಳೆದ ಮೂರು ಚುನಾವಣೆಯ ಬಲಾಬಲ: 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ 46,824 ಮತ ಗಳಿಸಿ ವಿಧಾನಸಭೆ ಪ್ರವೇಶ ಮಾಡಿದ್ದರು. ಕಾಂಗ್ರೆಸ್ನ ಪ್ರತಿಸ್ಪರ್ಧಿ ಬಿಆರ್ ಯಾವಗಲ್ 29,210 ಮತ ಸೋಲು ಕಂಡಿದ್ದರು. 17,614 ಮತಗಳ ಅಂತದಿಂದ ಸಿಸಿ ಪಾಟೀಲ್ ಗೆಲುವು ಸಾಧಿಸಿದ್ದರು.