ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಶುಕ್ರವಾರ ಸಂಜೆ ಜೆಡಿಎಸ್ ಸೇರ್ಪಡೆಗೊಂಡು ಕಮಲ ಪಾಳೆಯಕ್ಕೆ ಶಾಕ್ ನೀಡಿದರು. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಎಂ ಪಿ ಕುಮಾರಸ್ವಾಮಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಮೂಡಿಗೆರೆ ಶಾಸಕರಾಗಿದ್ದ ಎಂ ಪಿ ಕುಮಾರಸ್ವಾಮಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಘೋಷಿಸಿಲ್ಲ. ಇವರ ಬದಲಿಗೆ ಮೂಡಿಗೆರೆಯಿಂದ ದೀಪಕ್ ದೊಡ್ಡಯ್ಯ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿತ್ತು. ಹೈಕಮಾಂಡ್ ನಿರ್ಧಾರದಿಂದ ಎಂ ಪಿ ಕುಮಾರಸ್ವಾಮಿ ಬೇಸರಗೊಂಡಿದ್ದರು. ಜೊತೆಗೆ ಟಿಕೆಟ್ ಸಿಗದಿರಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರೇ ಕಾರಣ ಎಂದು ಆರೋಪಿಸಿದ್ದರು.
ಬಿಜೆಪಿಯಲ್ಲಿ ಬಂಡಾಯದ ಬಿಸಿ: ಬುಧವಾರ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೆಲ ಹಾಲಿ ಶಾಸಕರನ್ನು ಕೈ ಬಿಟ್ಟಿದೆ. ಇದರಿಂದ ಹಾಲಿ ಶಾಸಕರು ಅಸಮಾಧಾನಗೊಂಡು ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಮೂಡಿಗೆರೆಯಿಂದ ಮೂರು ಬಾರಿ ಶಾಸಕರಾಗಿದ್ದ ಎಂ ಪಿ ಕುಮಾರಸ್ವಾಮಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಇದರಿಂದ ಬಂಡಾಯ ಎದ್ದು ಪಕ್ಷ ತೊರೆದಿದ್ದಾರೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ
ಶಾಸಕ ಸ್ಥಾನಕ್ಕೆ ರಾಜೀನಾಮೆ: ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಶುಕ್ರವಾರ ಬೆಳಗ್ಗೆ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇನ್ನು ಗುರುವಾರವಷ್ಟೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ ಟಿಕೆಟ್ ತಪ್ಪಿದ್ದರೂ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಈ ಮೊದಲು ತಿಳಿಸಿದ್ದರು.
ಶುಕ್ರವಾರ ಶಿರಸಿಯಲ್ಲಿ ಮಾತನಾಡಿದ ಎಂ ಪಿ ಕುಮಾರಸ್ವಾಮಿ, ಮೂರು ಬಾರಿ ಶಾಸಕನಾಗಿರುವ ನನ್ನನ್ನು ಪಕ್ಷದಿಂದ ಓಡಿಸಿರುವುದಕ್ಕೆ ಸಿ ಟಿ ರವಿ ಹಾಗೂ ಪ್ರಾಣೇಶ್ ಕಾರಣ. ನನ್ನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವ ಹಾಗೆ ಮಾಡಿದರು ಎಂದು ಆರೋಪಿಸಿದರು.
ಇದನ್ನು ಓದಿ:ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್ ಬೈ:ಅಥಣಿ ಟಿಕೆಟ್ ಸಿಗದ ಹಿನ್ನೆಲೆ ಪಕ್ಷಕ್ಕೆ ಮತ್ತು ವಿಧಾನ ಪರಿಷತ್ ಸ್ಥಾನಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ ಸಲ್ಲಿಸಿ, ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದರು. ಲಕ್ಷ್ಮಣ ಸವದಿ ಅವರು ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಅಥಣಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಟಳ್ಳಿ ಸ್ಪರ್ಧಿಸುತ್ತಿದ್ದಾರೆ.
ಇನ್ನು ಟಿಕೆಟ್ ಸಿಗದೆ ಹಿನ್ನೆಲೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಶಾಸಕ ಸ್ಥಾನಕ್ಕೆ ಗುರುವಾರ ರಾತ್ರಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಇವರು ಘೋಷಿಸಿದ್ದಾರೆ.