ದಾವಣಗೆರೆ:ನರೇಂದ್ರ ಮೋದಿ ಸಮಾಧಿಗಾಗಿ ಗುಂಡಿ ತೋಡುತ್ತಿದ್ದೇವೆ ಎಂದು ಕಾಂಗ್ರೆಸ್ ತಿಳಿಸಿತ್ತು. ಆದ್ರೆ, ನರೇಂದ್ರ ಮೋದಿ ನಿಮ್ಮ ಕಮಲ ಅರಳುತ್ತದೆ ಎಂದು ಜನರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ಮರಳಿ ತರಲು ಕರ್ನಾಟಕ ನಿರ್ಧರಿಸಿದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಕಾರ್ಯಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸದಸ್ಯರಿಗೆ ಅಭಿನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದಾವಣಗೆರೆಯ ಜಿಎಂಐಟಿ ಕ್ಯಾಂಪಸ್ ಬಳಿಯಿರುವ ವಿಶಾಲ ಮೈದಾನದಲ್ಲಿ ಆಯೋಜಿಸಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದ ಮಹಾಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದರು. ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಲು ಅಪಾರ ಜನಸ್ತೋಮ ನೆರೆದಿರುವುದು ಕಂಡು ಬಂತು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ:ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ನಾಯಕರ ಖಜಾನೆ ತುಂಬಿಸುವ ಎಟಿಎಂನಂತೆ ಕಾಣುತ್ತಿದೆ. ಕಾಂಗ್ರೆಸ್ ನಾಯಕರು ಗ್ಯಾರಂಟಿ ನೀಡುತ್ತಿದ್ದಾರೆ. ಅವರು ಕೊಡುವ ಗ್ಯಾರಂಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದಕ್ಕೆ ಹಿಮಾಚಲ ಪ್ರದೇಶವೇ ನಿಜವಾದ ಉದಾಹರಣೆಯಾಗಿದೆ. ಆ ರಾಜ್ಯದಲ್ಲಿ ಚುನಾವಣೆಗೂ ಮುನ್ನ ಹಲವು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದ್ದರು. ಬಳಿಕ ಬಜೆಟ್ನಲ್ಲಿ ಏನನ್ನೂ ಕೊಡಲಿಲ್ಲ. ಅದೇ ರೀತಿ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಯಾವುದೇ ಸಕಾರಾತ್ಮಕ ಅಜೆಂಡಾಗಳನ್ನು ಹೊಂದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಬಹುಮತ ಅತ್ಯಗತ್ಯ:ದಲಿತ ಸಮುದಾಯ ಸೇರಿದಂತೆ ಇತರ ಸೌಲಭ್ಯ ವಂಚಿತ ಸಮುದಾಯಗಳ ಅಭಿವೃದ್ಧಿಯೇ ಬಿಜೆಪಿಯ ಆದ್ಯತೆಯಾಗಿದೆ. ಎಲ್ಲ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಲು ಪೂರ್ಣ ಬಹುಮತ ಅವಶ್ಯವಿದೆ. ಕರ್ನಾಟಕ ರಾಜ್ಯಕ್ಕೆ ಸ್ಥಿರ ಸರ್ಕಾರ ಅಗತ್ಯವಿದೆ. ರಾಜ್ಯಕ್ಕೆ ಪೂರ್ಣ ಬಹುಮತದ ಸರ್ಕಾರ ಬೇಕೋ ಅಥವಾ ಬೇಡವೋ ಎಂದು ನೆರದಿದ್ದ ಜನರನ್ನು ಪ್ರಶ್ನಿಸಿದರು. ಕರ್ನಾಟಕ ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಬಹುಮತ ಅತ್ಯಗತ್ಯ ಎಂದು ಹೇಳಿದರು.
ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ:ಬೆಂಗಳುರು-ಮೈಸೂರು ಎಕ್ಸ್ಪ್ರೆಸ್ ವೇ ಹಾಗೂ ವೈಟ್ಫಿಲ್ಡ್ ಮೆಟ್ರೋ ಉದ್ಘಾಟನೆ ಸೇರಿದಂತೆ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿ ನರೇಂದ್ರ ಮೋದಿ ಅವರು, ಡಬಲ್ ಎಂಜಿನ್ ಸರ್ಕಾರದಿಂದ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಂದು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಉಪಯೋಗವನ್ನು ರೈತರಿಗೆ ಸಿಗದಂತೆ ಮಾಡಿತ್ತು. ಪ್ರಸ್ತುತ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹೆಚ್ಚು ರೈತರಿಗೆ ಈ ಯೋಜನೆಯ ಲಾಭ ಲಭಿಸಿತು ಎಂದು ತಿಳಿಸಿದರು.