ನವದೆಹಲಿ:ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಅಳೆದೂ ತೂಗಿ 189 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ದೆಹಲಿ ಬಿಜೆಪಿ ಕಚೇರಿಯಲ್ಲಿಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ಸುದ್ದಿಗೋಷ್ಟಿ ನಡೆಸಿ ಅಭ್ಯರ್ಥಿಗಳ ಹೆಸರು ಪ್ರಕಟಗೊಳಿಸಿದರು. ಎರಡನೇ ಹಂತದಲ್ಲಿ 35 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ಬಾಕಿ ಉಳಿಸಿಕೊಂಡಿದೆ.
52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. 32 ಇತರೆ ಹಿಂದುಳಿದ ವರ್ಗಕ್ಕೆ, 30 ಎಸ್‌ಸಿ ಸಮುದಾಯದ ಅಭ್ಯರ್ಥಿಗಳಿಗೆ, 16 ಎಸ್‌ಟಿ ಸಮುದಾಯದವರಿಗೆ, 9- ವೈದ್ಯರಿಗೆ ಹಾಗೂ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ 8 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಮೊದಲ ಪಟ್ಟಿಯಲ್ಲಿರುವ ಪ್ರಮುಖರು:ವರುಣಾ ಮತ್ತು ಚಾಮರಾಜನಗರ ಕ್ಷೇತ್ರಕ್ಕೆ ವಿ.ಸೋಮಣ್ಣ ಹಾಗೂ ಪದ್ಮನಾಭ ನಗರ ಮತ್ತು ಕನಕಪುರಕ್ಕೆ ಆರ್.ಅಶೋಕ್ ಅವರಿಗೆ ಟಿಕೆಟ್ ದೊರೆತಿದೆ. ಗೋಕಾಕ್ನಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ, ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ಗೆ ಔರಾದ್ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಬೀಳಗಿಯಲ್ಲಿ ಸಚಿವ ಮುರುಗೇಶ ನಿರಾಣಿ, ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ್, ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್ಗೆ ಹಾಗೂ ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲುಗೆ ಟಿಕೆಟ್ ಕೊಡಲಾಗಿದೆ.
''25 ಸಾವಿರ ಕಾರ್ಯಕರ್ತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ'' ಎಂದು ಸುದ್ದಿಗೋಷ್ಟಿಯಲ್ಲಿ ಧರ್ಮೇಂದ್ರ ಪ್ರಧಾನ್ ಹೇಳಿದರು.
ಇದನ್ನೂ ಓದಿ:ಈಶ್ವರಪ್ಪ ನಿರ್ಣಯ ಮಾದರಿ, ಶೆಟ್ಟರ್ ಇದೊಂದು ಸಲ ಅಂದಿದ್ದಾರೆ, ಸವದಿಗೆ ದುಡುಕಬೇಡಿ ಎಂದಿದ್ದೇನೆ- ಸಿಎಂ