ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಹೊಸದಲ್ಲ. ಈ ಬಾರಿಯೂ ಕೂಡ ಅಪ್ಪ, ಮಕ್ಕಳು ಚುನಾವಣಾ ಕಣದಲ್ಲಿದ್ದರು. ಅಂತಹ ಕುಟುಂಬ ನಾಯಕರುಗಳಲ್ಲಿ ಯಾರು ಗೆದ್ದರು, ಮತ್ತು ಸೋತವರಾರು ನೋಡೋಣ.
ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್: ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ವಿರುದ್ಧ ಸುಮಾರು 27 ಸಾವಿರ ಮತಗೊಳಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದರು. ಈ ಬಾರಿಯ ಚುನಾವಣೆಯಲ್ಲಿ 94,019 ಮತಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕೆ.ಎಚ್.ಮುನಿಯಪ್ಪ ಮತ್ತು ರೂಪಕಲಾ.ಎಂ: ಕೋಲಾರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ, 73 ಸಾವಿರ ಮತಗಳನ್ನು ಪಡೆದುಕೊಂಡು ಜೆಡಿಎಸ್ನ ನಿಸರ್ಗ ರಂಗಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇವರ ಪುತ್ರಿ ರೂಪಕಲಾ.ಎಂ ಅವರು ಕೂಡ ಕೆಜಿಎಫ್ ಕ್ಷೇತ್ರದಲ್ಲಿ ಸ್ಪರ್ಧಿಸಿ ದಾಖಲೆಯ 50 ಸಾವಿರ ಮತಗಳಿಂದ ಗೆಲುವಿನ ನಗೆ ಬೀರಿದರು.
ಸೌಮ್ಯ ರೆಡ್ಡಿ ಮತ್ತು ರಾಮಲಿಂಗಾ ರೆಡ್ಡಿ: ಕಾಂಗ್ರೆಸ್ನ ಹಾಲಿ ಶಾಸಕರಾಗಿರುವ ಇಬ್ಬರೂ ಕ್ರಮವಾಗಿ ಈ ಬಾರಿಯೂ ಜಯನಗರ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಸೌಮ್ಯ ರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ವಿರುದ್ಧ 3 ಸಾವಿರ ಅಂತರದಿಂದ ಗೆದ್ದಿದ್ದಾರೆ. ಬಿಟಿಎಂ ಲೇಔಟ್ ಕ್ಷೇತ್ರದ ರಾಮಲಿಂಗಾ ರೆಡ್ಡಿ 68,557 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.
ಎಂ.ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ: ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿದಿದ್ದ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಪ್ರಿಯಾಕೃಷ್ಣ 82,134 ಮತಗಳನ್ನು ಪಡೆದು ಗೆಲವು ಪಡೆದಿದ್ದರೆ, ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಂದೆ ಎಂ.ಕೃಷ್ಣಪ್ಪ ಬಿಜೆಪಿ ಅಭ್ಯರ್ಥಿ ಹೆಚ್.ರವೀಂದ್ರ ವಿರುದ್ದ 7 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ: ಜೆಡಿಎಸ್ನಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ರಾಜಕೀಯದಲ್ಲಿ ನೆಲೆವೂರಲು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎ.ಇಕ್ಬಾಲ್ ಅನ್ಸಾರಿ ಎದುರು ಸೋತು ನಿರಾಸೆ ಮೂಡಿಸಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ಗೆದ್ದಿದ್ದಾರೆ.
ಜಿ.ಡಿ.ದೇವೇಗೌಡ ಮತ್ತು ಜಿ.ಡಿ.ಹರೀಶ್ ಗೌಡ: ಮೈಸೂರು ರಾಜಕಾರಣದಲ್ಲಿನ ಹಿರಿಯರಲ್ಲಿ ಒಬ್ಬರಾದ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಜಿ.ಟಿ.ಹರೀಶ್ಗೌಡ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾಗಿ ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಜಿ.ಟಿ.ದೇವೆಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 1,04,873 ಮತಗಳನ್ನು ಪಡೆದು ಗೆಲುವು ಪಡೆದುಕೊಂಡಿದ್ದರೆ. ಪುತ್ರ ಜಿ.ಡಿ.ಹರೀಶ್ಗೌಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ವಿರುದ್ಧ 2 ಸಾವಿರ ಮತಗಳಿಂದ ಗೆದ್ದಿದ್ದಾರೆ.
ಎ.ಮಂಜು ಮತ್ತು ಮಂಥರ್ ಗೌಡ:ಎ.ಮಂಜು ಅವರು ಜೆಡಿಎಸ್ ಅಭ್ಯರ್ಥಿಯಾಗಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೆ. ಇವರ ಮಗ ಮಂಥರ್ ಗೌಡ ಅವರು ಮಡಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಅಪ್ಪಚ್ಚು ರಂಜನ್ ವಿರುದ್ಧ 4 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:ಎರಡು ದಶಕಗಳ ಚುನಾವಣಾ ಇತಿಹಾಸದಲ್ಲೇ ಜೆಡಿಎಸ್ ಅತ್ಯಂತ ಕಳಪೆ ಸಾಧನೆ!