ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಂಗಳವಾರ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕೇಸರಿ ಪಡೆ ಇಂದು 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಏಳು ಹಾಲಿ ಶಾಸಕರ ಟಿಕೆಟ್ ಕೈ ತಪ್ಪಿದೆ. ಹಿರಿಯ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿನಿಸುವ ಹುಬ್ಬಳ್ಳಿ - ಧಾರವಾಡ ಕೇಂದ್ರ ಮತ್ತು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಕೆಎಸ್ ಈಶ್ವರಪ್ಪ ಅವರ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಬಾಕಿ ಇದೆ.
2ನೇ ಪಟ್ಟಿಯಲ್ಲಿ ಪ್ರಮುಖವಾಗಿ ಜೈಲು ಶಿಕ್ಷೆಗೆ ಗುರಿಯಾಗಿ ಕಾನೂನು ಹೋರಾಟ ನಡೆಸುತ್ತಿರುವ ಹಾವೇರಿ ಶಾಸಕ ನೆಹರೂ ಓಲೆಕಾರ್, ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಕಲಘಟಗಿಯ ನಿಂಬಣ್ಣನವರ್, ವಿವಾದದಿಂದಾಗಿ ಕ್ಷೇತ್ರದ ಕಾರ್ಯಕರ್ತರ ಅಸಮಧಾನಕ್ಕೊಳಗಾಗಿರುವ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಬೈಂದೂರಿನ ಸುಕುಮಾರಶೆಟ್ಟಿ, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಕಟಿಸಿದ್ದ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್, ಮಾಯಕೊಂಡ ಕ್ಷೇತ್ರದ ಶಾಸಕ ಲಿಂಗಣ್ಣಗೆ ಈ ಬಾರಿ ಕೊಕ್ ನೀಡಲಾಗಿದೆ. ಅಲ್ಲಿ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ.