ಕರ್ನಾಟಕ

karnataka

ETV Bharat / assembly-elections

ಬಿಜೆಪಿ ಅಶ್ವಮೇಧ ಕುದುರೆ ಕಟ್ಟಿಹಾಕಲು ಕಾಂಗ್ರೆಸ್, ಜೆಡಿಎಸ್ ಯತ್ನ: ಬಸವನಗುಡಿ ಕ್ಷೇತ್ರದ ಚಿತ್ರಣ ಹೀಗಿದೆ.. - ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರಿನ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದ್ದು, ಹಾಲಿ ಶಾಸಕ ರವಿಸುಬ್ರಮಣ್ಯ ಸತತ ನಾಲ್ಕನೇ ಬಾರಿ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ಹಂಚಿಕೆ ನಿರ್ಧಾರವಾಗಿಲ್ಲ. ಕಾಂಗ್ರೆಸ್​ ಅಭ್ಯರ್ಥಿ ಅಧಿಕೃತವಾಗಿ ಯುಬಿ ವೆಂಕಟೇಶ್ ಹೆಸರನ್ನು ಘೋಷಿಸಲಾಗಿದೆ. ಕ್ಷೇತ್ರವನ್ನು ಮರಳಿ ದಕ್ಕಿಸಿಕೊಡಲಿದ್ದಾರಾ?. ಜೆಡಿಎಸ್​ಗೆ ಅರಮನೆ ಶಂಕರ್ ಗೆಲುವಿನ ಉಡುಗೊರೆ ಕೊಡುತ್ತಾರಾ ಎಂಬ ​ಚರ್ಚೆ ಶುರುವಾಗಿದೆ.

karnataka-assembly-election-2023-details-of-basavanagudi-constituency
ಬಿಜೆಪಿ ಅಶ್ವಮೇಧ ಕುದುರೆ ಕಟ್ಟಿಹಾಕಲು ಕಾಂಗ್ರೆಸ್, ಜೆಡಿಎಸ್ ಯತ್ನ: ಬಸವನಗುಡಿಯ ಮೇಲೆ ವಿಜಯ ಪತಾಕೆ ಹಾರಿಸುವುದು ಯಾರು?

By

Published : Mar 25, 2023, 3:59 PM IST

Updated : Mar 25, 2023, 4:13 PM IST

ಬೆಂಗಳೂರು:ಹಳೆ ಬೆಂಗಳೂರಿನ ಪ್ರಮುಖ ಕ್ಷೇತ್ರವಾಗಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರ ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸೊಗಡಿನ ಜೊತೆಗೆ ಪ್ರಮುಖ ವ್ಯಾಪಾರಿ ತಾಣವನ್ನೂ ಹೊಂದಿದೆ. ಕನ್ನಡಿಗರೇ ಹೆಚ್ಚಾಗಿ ವಾಸಿಸುವ ಹಾಗು ಸಾಂಪ್ರದಾಯಿಕ ತಿಂಡಿಗಳಿಗೂ ಹೆಸರುವಾಸಿಯಾದ ವಸತಿ ಮತ್ತು ವಾಣಿಜ್ಯ ಬಡಾವಣೆಯಾಗಿದೆ. ಕಡಲೆಕಾಯಿ ಪರಿಷೆಯಿಂದ ವಿಶ್ವವಿಖ್ಯಾತವಾಗಿರುವ ಬಸವನಗುಡಿ ಕ್ಷೇತ್ರದ ಸದ್ಯದ ರಾಜಕೀಯ ಚಿತ್ರಣದ ಕುರಿತ ಪಕ್ಷಿನೋಟ ಇಲ್ಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಳೆಯ ಕ್ಷೇತ್ರಗಳಲ್ಲಿ ಬಸವನಗುಡಿ ಕ್ಷೇತ್ರವೂ ಒಂದು. ದೊಡ್ಡ ಬಸವಣ್ಣ ದೇವಸ್ಥಾನ ಇರುವುದರಿಂದಾಗಿ ಈ ಪ್ರದೇಶಕ್ಕೆ ಬಸವನಗುಡಿ ಎನ್ನುವ ಹೆಸರು ಬಂದಿದೆ. ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದ್ದರೆ, ಜೆಡಿಎಸ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬ್ರಾಹ್ಮಣ ಮತ್ತು ಒಕ್ಕಲಿಗರ ಸಮಾನ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಈ ಎರಡು ಸಮುದಾಯಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ.

ವಾರ್ಡ್​ಗಳ ವಿವರ:ಬಸವನಗುಡಿ ವಿಧಾನಸಭಾ ಕ್ಷೇತ್ರ ಐದು ವಾರ್ಡ್​ಗಳನ್ನು ಹೊಂದಿದೆ. ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ ವಾರ್ಡ್​ಗಳು ಬರುತ್ತದೆ. ಈ ಕ್ಷೇತ್ರದಲ್ಲಿ 2,45,325 ಮತದಾರರು ಇದ್ದಾರೆ. 1,25,686 ಪುರುಷ ಮತದಾರರು ಮತ್ತು 1,19,614 ಮಹಿಳಾ ಮತದಾರರು ಹಾಗೂ 25 ತೃತೀಯ ಲಿಂಗ ಮತದಾರರು ಇದ್ದಾರೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದ ಮಾಹಿತಿ

ಚುನಾವಣೆ ಹಿನ್ನೋಟ:ಈವರೆಗೂ 15 ಬಾರಿ ಬಸನಗುಡಿ ಕ್ಷೇತ್ರವು ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಬಿಜೆಪಿ 5 ಬಾರಿ, ಕಾಂಗ್ರೆಸ್ 4 ಬಾರಿ ಗೆದ್ದಿದ್ದರೆ, ಜನತಾ ಪಕ್ಷ 3 ಬಾರಿ, ಜನತಾ ದಳ 2 ಬಾರಿ, ಪಕ್ಷೇತರ ಅಭ್ಯರ್ಥಿ ಒಂದು ಬಾರಿ ಗೆದ್ದಿದ್ದಾರೆ. 1994ರಿಂದ ಈವರೆಗೆ ನಡೆದಿರುವ 6 ಚುನಾವಣೆಯಲ್ಲಿ 2004ರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿರುವುದು ಬಿಟ್ಟರೆ ಉಳಿದ ಐದು ಬಾರಿ, ಅದರಲ್ಲಿಯೂ ಕಳೆದ ಮೂರು ಬಾರಿ ಸತತವಾಗಿ ಬಿಜೆಪಿ ಗೆದ್ದಿದೆ.

ರಾಮಕೃಷ್ಣ ಹೆಗಡೆಗೆ ಗೆಲುವಿನ ಉಡುಗೊರೆ:ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಗೆಲುವಿನ ಉಡುಗೊರೆ ನೀಡಿದ್ದ ಕ್ಷೇತ್ರ ಬಸವನಗುಡಿ. ಉತ್ತರ ಕನ್ನಡ ಮೂಲಕ ಹೆಗಡೆ 1985ರಲ್ಲಿ ಬಸವನಗುಡಿಯಿಂದ ಆಯ್ಕೆಯಾಗಿದ್ದರು. 1989ರಲ್ಲಿಯೂ ಇದೇ ಕ್ಷೇತ್ರದ ಜನತೆ ಮತ್ತೊಮ್ಮೆ ಹೆಗಡೆ ಕೈಹಿಡಿದು ಗೆಲುವಿನ ಉಡುಗೊರೆ ನೀಡಿದ್ದರು.

ಕಳೆದ ಮೂರು ಚುನಾವಣೆ ಫಲಿತಾಂಶ:2008ರಲ್ಲಿ ಬಿಜೆಪಿಯ ರವಿಸುಬ್ರಮಣ್ಯ 50,294 ಮತ ಪಡೆದರೆ, ಕಾಂಗ್ರೆಸ್​ನ ಕೆ.ಚಂದ್ರಶೇಖರ್ 37,094 ಮತ ಪಡೆದು ಪರಾಜಿತರಾಗಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರವಿಸುಬ್ರಮಣ್ಯ 43,876 ಮತ ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಬಾಗೇಗೌಡ 24,163 ಮತ ಪಡೆದು ಪರಾಜಿತರಾಗಿದ್ದರು. 2018ರಲ್ಲಿ ಮತ್ತೊಮ್ಮೆ ರವಿಸುಬ್ರಮಣ್ಯ 76,018 ಮತ ಪಡೆದು ಜಯ ದಾಖಲಿಸಿದ್ದರು. ಜೆಡಿಎಸ್​ನ ಬಾಗೇಗೌಡ 38,009 ಮತ ಪಡೆದು ಸೋಲು ಕಂಡಿದ್ದರು. ಕ್ಷೇತ್ರದ ಮೂರು ಚುನಾವಣೆಯ ಅವಲೋಕನ ಮಾಡಿದರೆ ಬಿಜೆಪಿ ಹೆಚ್ಚಿನ ಮತ ಹಂಚಿಕೆ ಪ್ರಮಾಣ ಹೊಂದಿರುವುದು ಸ್ಪಷ್ಟವಾಗಿದ್ದು, ಜೆಡಿಎಸ್ ಪ್ರಬಲ ಪೈಪೋಟಿ ನೀಡಿದೆ.

ಬಿಜೆಪಿ ಆಕಾಂಕ್ಷಿಗಳು:ಬಿಜೆಪಿಯಿಂದ ಹಾಲಿ ಶಾಸಕ ರವಿಸುಬ್ರಮಣ್ಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಸತತವಾಗಿ ಮೂರು ಬಾರಿ ಬಸವನಗುಡಿಯಿಂದ ಆಯ್ಕೆಯಾಗಿರುವ ರವಿಸುಬ್ರಮಣ್ಯ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರ ನಡುವೆ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡುವ ನಿರ್ಧಾರ ಮಾಡಿದಲ್ಲಿ ರವಿಸುಬ್ರಮಣ್ಯಗೆ ಟಿಕೆಟ್ ಕೈತಪ್ಪಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಆ ಸಾಧ್ಯತೆ ತೀರಾ ಕಡಿಮೆ ಎನ್ನಲಾಗ್ತಿದೆ.

ಮತ್ತೊಂದೆಡೆ, ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಬಸವನಗುಡಿ ಅಥವಾ ಜಯನಗರ ಕ್ಷೇತ್ರ ಎರಡದಲ್ಲಿ ಒಂದು ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಜಯನಗರ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್​ ಅವರಿಗೆ ಟಿಕೆಟ್ ನೀಡಬಹುದು. ಒಂದು ವೇಳೆ ಬಸವನಗುಡಿ ಕ್ಷೇತ್ರಕ್ಕೆ ಅವರನ್ನು ಪರಿಗಣಿಸಿದರೆ ರವಿಸುಬ್ರಮಣ್ಯ ಕ್ಷೇತ್ರ ಕಳೆದುಕೊಳ್ಳಬೇಕಾಗಲಿದೆ. ಆಮ್ ಆದ್ಮಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಈಗ ಬಿಜೆಪಿ ಸೇರ್ಪಡೆಯಾಗಿದ್ದು, ಅವರು ಕೂಡ ಟಿಕೆಟ್ ಸಿಕ್ಕರೆ ಸ್ಪರ್ಧೆಗೆ ಸಿದ್ದರಾಗಿ ನಿಂತಿದ್ದಾರೆ.

ಯುಬಿ ವೆಂಕಟೇಶ್​ಗೆ ಕೈ ಟಿಕೆಟ್​​:ಕಾಂಗ್ರೆಸ್​ನಿಂದ ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಕೂಡ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಶಂಕರ್ ಗುಹಾ ಮನವೊಲಿಕೆ ಮಾಡುವಲ್ಲಿ ಸಫಲರಾಗಿದ್ದು, ಯುಬಿ ವೆಂಕಟೇಶ್ ಹಾದಿ ಸುಗಮವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಇವರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಜೆಡಿಎಸ್​ನಿಂದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಬಾಗೇಗೌಡ ಆಕಾಂಕ್ಷಿಯಾಗಿದ್ದರಾದರೂ ಈ ಬಾರಿ ಪಕ್ಷ ಅರಮನೆ ಶಂಕರ್​ಗೆ ಟಿಕೆಟ್ ನೀಡಿದೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಶಂಕರ್ ಪ್ರಚಾರ ಕಾರ್ಯವನ್ನು ಶುರು ಮಾಡಿದ್ದಾರೆ.

ಕ್ಷೇತ್ರದ ಸಮಸ್ಯೆಗಳು:ಕುಡಿಯುವ ನೀರಿನ ಪೂರೈಕೆ ಮಾಡುವ ಪೈಪ್ ಲೈನ್​ಗಳು ಮತ್ತು ಒಳಚರಂಡಿ ಮಾರ್ಗ ಅರ್ಧ ಶತಮಾನದಷ್ಟ ಹಳೆಯದಾಗಿದ್ದು ಅಲ್ಲಲ್ಲಿ ಸಮಸ್ಯೆಗಳು ಕಾಣುತ್ತಿವೆ. ಇವುಗಳ ದುರಸ್ತಿ ಕಠಿಣವಾಗುತ್ತಿದ್ದು, ಪೈಪ್​ ಲೈನ್​ಗಳ ಬದಲಾವಣೆ ಮಾಡಬೇಕಾದ ಸ್ಥಿತಿ ಇದೆ. ಕುಡಿಯುವ ನೀರಿನ ಪೂರೈಕೆ ವ್ಯತ್ಯಯ, ಕಸ ವಿಲೇವಾರಿ ಸಮಸ್ಯೆ ಅಲ್ಲಲ್ಲಿ ಕಾಣುತ್ತಿದೆ. ಕೆಲವೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯೂ ಇದೆ. ಕ್ಷೇತ್ರದಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲ.

ಇದನ್ನೂ ಓದಿ:ಕರ್ನಾಟಕ ಚುನಾವಣೆ 2023: ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯ ವರುಣ, ಡಿಕೆಶಿಗೆ ಕನಕಪುರ

Last Updated : Mar 25, 2023, 4:13 PM IST

ABOUT THE AUTHOR

...view details