ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಆಮ್ ಆದ್ಮಿ ಪಕ್ಷ ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಳೆದ ವಾರವಷ್ಟೇ 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಆಮ್ ಆದ್ಮಿ ಪಾರ್ಟಿಯು 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿತು. ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹಾಗೂ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ:ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.. ಟೆನ್ನಿಸ್ ಕೃಷ್ಣ, ಬ್ರಿಜೇಶ್ ಕಾಳಪ್ಪ ಸೇರಿ ಯಾರಿಗೆಲ್ಲ ಟಿಕೆಟ್?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, ಬೇರೆಲ್ಲ ಪಕ್ಷಗಳಿಗಿಂತ ಮೊದಲೇ ನಾವು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದೆವು. ನಂತರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೆವು. ಈಗ 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದೇವೆ. ಬೇರೆಲ್ಲ ಪಕ್ಷಗಳಿಗಿಂತ ನಾವು ಮುಂದಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ಆಮ್ ಆದ್ಮಿ ಪಾರ್ಟಿಯು ಜನಸಾಮಾನ್ಯರಿಗೆ ಅವಕಾಶ ನೀಡುತ್ತಿದೆ. ಮೊದಲಪಟ್ಟಿಯಂತೆ ಎರಡನೇ ಪಟ್ಟಿಯಲ್ಲಿ ಕೂಡ ಅಭ್ಯರ್ಥಿಗಳ ಸರಾಸರಿ ವಯಸ್ಸು 45 ದಾಟಿಲ್ಲ. ಎರಡು ಪಟ್ಟಿಯಲ್ಲಿ ಒಟ್ಟು 14 ರೈತರಿಗೆ, 11 ಮಹಿಳೆಯರಿಗೆ, 18 ವಕೀಲರು, 6 ವೈದ್ಯರು, 23 ಇಂಜಿನಿಯರ್‌ಗಳು ಹಾಗೂ 4 ಐಟಿ ವೃತ್ತಿಪರರು ಹಾಗೂ 5 ಮಂದಿ ಡಾಕ್ಟರೇಟ್ ಪಡೆದವರು ಇದ್ದಾರೆ. 29 ಜನರ ಸ್ನಾತಕೋತ್ತರ ಪದವೀಧರರು, 68 ಪದವೀಧರರು, 6 ಎಂಬಿಎ ಪದವೀಧರರನ್ನು ಈ ಎರಡು ಪಟ್ಟಿಗಳು ಒಳಗೊಂಡಿವೆ ಎಂದು ಹೇಳಿದರು.
ಬಿಎಂಟಿಸಿ ಮಾಜಿ ಕಂಡಕ್ಟರ್‌ಗೆ ಟಿಕೆಟ್:ಬಿಎಂಟಿಸಿ ಮಾಜಿ ಕಂಡಕ್ಟರ್‌ಗೆ ಕೂಡ ನಾವು ಟಿಕೆಟ್ ಕೊಡುತ್ತಿದ್ದು, ಇದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಎರಡನೇ ಪಟ್ಟಿಯ 60 ಅಭ್ಯರ್ಥಿಗಳಲ್ಲಿ 59 ಅಭ್ಯರ್ಥಿಗಳು ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಸಮೀಕ್ಷೆಯಲ್ಲಿ 46% ಜನರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬದಲು ಹೊಸ ಪಕ್ಷ ಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಹೊಸ ಪಕ್ಷ ಮಾತ್ರವಲ್ಲದೇ ಹೊಸ ಮುಖಗಳನ್ನು ರಾಜಕೀಯಕ್ಕೆ ಕರೆತಂದು ಜನರಿಗೆ ಆಯ್ಕೆ ನೀಡಿದ್ದೇವೆ. ಪಂಜಾಬ್ ಚುನಾವಣೆಯಲ್ಲಿ ಅಲ್ಲಿನ ಆಗಿನ ಮುಖ್ಯಮಂತ್ರಿಯನ್ನು ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುವವರೊಬ್ಬರು ಸೋಲಿಸಿದ್ದರು. ನಾವು ಅದರಿಂದ ಸ್ಫೂರ್ತಿ ಪಡೆದಿದ್ದು, ಇಲ್ಲಿಯೂ ಅಂತಹ ಮ್ಯಾಜಿಕ್‌ಗಳು ನಡೆಯುವ ನಿರೀಕ್ಷೆಯಿದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.
ಮಾರ್ಚ್ 20 ರಂದು ಆಮ್ ಆದ್ಮಿ ಪಾರ್ಟಿಯು ತಮ್ಮ 80 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿತ್ತು. ಹಾಸ್ಯ ನಟ ಟೆನ್ನಿಸ್ ಕೃಷ್ಣ, ಬ್ರಿಜೇಶ್ ಕಾಳಪ್ಪ ಸೇರಿದಂತೆ ಹಲವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿತ್ತು.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ ಹಾಗೂ ವಕ್ತಾರೆ ಉಷಾ ಮೋಹನ್ ಭಾಗವಹಿಸಿದ್ದರು.
ಇದನ್ನೂ ಓದಿ:3 ಸಾವಿರ ರೂ. ನಿರುದ್ಯೋಗ ಭತ್ಯೆ, 300 ಯುನಿಟ್ ಉಚಿತ ವಿದ್ಯುತ್.. ಆಪ್ ಪ್ರಣಾಳಿಕೆ ಪಟ್ಟಿಯಲ್ಲಿ ಏನುಂಟ ಏನಿಲ್ಲ?