ನವದೆಹಲಿ:ಕರ್ನಾಟಕವು ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಗುರುತಾಗಿದೆ. ಚುನಾವಣಾ ರಾಕೀಯದ ದೃಷ್ಟಿಯಿಂದ ಭಾರತೀಯ ಜನತಾ ಪಕ್ಷಕ್ಕೆ ಇದು ಬಹಳ ಪ್ರಮುಖವಾಗಿದೆ. ಇಲ್ಲಿ ಪಕ್ಷ ಅಧಿಕಾರ ಸ್ಥಾಪನೆ ಮಾಡಿದೆ. ಸದ್ಯ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಮತ್ತೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನೇ ಮುಂದು ಮಾಡಿಕೊಂಡು ಈ ಬಾರಿಯ ಚನಾವಣೆ ಎದುರಿಸಲು ಪಕ್ಷ ಚುನಾವಣಾ ರಣತಂತ್ರ ರೂಪಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಮತ್ತು ಕಲ್ಯಾಣ ಯೋಜನೆಗಳ ಫಲಾನುಭವಿಗಳ ಮೇಲೆ ಬಿಜೆಪಿ ದೃಷ್ಟಿ ಹಾಯಿಸಿದೆ. ಅವರನ್ನೇ ತನ್ನ ಮತಬ್ಯಾಂಕ್ ಆಗಿ ಪರಿವರ್ತಿಸಲು ಮುಂದಾಗಿದೆ. ಇದರ ಪ್ರಚಾರಕ್ಕಾಗಿ ಪಕ್ಷದ ಹಿರಿಯ ನಾಯಕರನ್ನೇ ಬಳಸಿಕೊಳ್ಳುತ್ತಿದೆ. ಅವರ ಮೂಲಕ ಈ ಯೋಜನೆಗಳನ್ನು ಪ್ರಚಾರ ನಡೆಸಿದೆ. ಸಾರ್ವಜನಿಕ ಸಂಪರ್ಕ, ರ್ಯಾಲಿಗಳ ಮೂಲಕ ಹೆಚ್ಚಿನ ಪ್ರಚಾರ ನಡೆಸಲು ಯೋಜನೆ ರೂಪಿಸಲಾಗಿದೆ.
ರಾಜ್ಯದಲ್ಲಿ ಕಮಾಲ್ ಮಾಡಲು ಮೋದಿ- ಶಾ ತಯಾರಿ ಕೇಂದ್ರ ನಾಯಕರ ಮೊರೆ:ಚುನಾವಣಾ ಪ್ರಚಾರದ ಭಾಗವಾಗಿ ಕೇಂದ್ರ ನಾಯಕರನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಇವರ ಪ್ರಮುಖ ಆದ್ಯ ಹೊಣೆಯಾಗಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಸೇರಿದಂತೆ ಹಲವಾರು ಗಣ್ಯ ನಾಯಕರು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.
ಇದಲ್ಲದೇ, ಪಕ್ಷದ ಫೈರ್‌ಬ್ರಾಂಡ್ ನಾಯಕರಾದ ಯೋಗಿ ಆದಿತ್ಯನಾಥ್ ಮತ್ತು ಹಿಂದುತ್ವದ ಸಾಂಕೇತಿಕ ನಾಯಕರು ಎಂದು ಪರಿಗಣಿಸಲಾದ ಇತರ ನಾಯಕರು ಮುಸ್ಲಿಂ ಮೀಸಲಾತಿ ಮತ್ತು ತುಷ್ಟೀಕರಣದ ಸಮಸ್ಯೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯಲಿದ್ದಾರೆ. ಬೆಲೆ ಇಳಿಕೆಗೆ ಪರಿಹಾರ ಮತ್ತು ಇತರ ವಿಷಯಗಳನ್ನು ತಮ್ಮ ಭಾಷಣಗಳ ಮೂಲಕ ಹರಡಲಿದ್ದಾರೆ.
ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಅತ್ಯಂತ ಆಕ್ರಮಣಕಾರಿ ಪ್ರವೃತ್ತಿ ಹೊಂದಿದೆ. ರ್ಯಾಲಿಗಳು ಮತ್ತು ಭಾಷಣಗಳಲ್ಲಿ ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ವಿಶೇಷವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜಾಮೀನು ಬಗ್ಗೆ ತೀವ್ರವಾಗಿ ಪ್ರಸ್ತಾಪಿಸಿ, ಕಾಂಗ್ರೆಸ್ ಮೇಲೆ ದಾಳಿಗೆ ಸಿದ್ಧವಾಗಿದೆ. ಇದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಹಾಗೂ ಸಾಧನೆಗಳನ್ನು ಪ್ರಸ್ತಾಪಿಸಿ, ಫಲಾನುಭವಿಗಳ ಸಂಖ್ಯೆ, ಜನರಿಗೆ ಆಗುವ ಅನುಕೂಲಗಳ ಬಗ್ಗೆ ಪ್ರಚುರ ಪಡಿಸಲಾಗುತ್ತದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಸಿಕ್ಕಿದೆ.
ಕುಟುಂಬವಾದದ ಬಗ್ಗೆ ಟೀಕೆ:ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಕೂಡ ಅದರ ಎದುರಾಳಿಯಾಗಿದೆ. ಈ ಎರಡೂ ಪಕ್ಷಗಳು ಈ ಹಿಂದೆ ಮೈತ್ರಿಕೂಟ ಮಾಡಿಕೊಂಡಿದ್ದವು. ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಭ್ರಷ್ಟಾಚಾರದ ಜೊತೆಗೆ ಕುಟುಂಬವಾದದ ಬಗ್ಗೆಯೂ ಪ್ರಸ್ತಾಪಿಸಲಿದೆ. ಮೋದಿ ಉಪನಾಮದ ಕುರಿತು ಒಬಿಸಿ ಸಮುದಾಯದ ವಿರುದ್ಧ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಈ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಲಿದೆ.
ಕರ್ನಾಟಕದ ಮೂಲಕ ದಂಡಯಾತ್ರೆ:ಕರ್ನಾಟಕದಲ್ಲಿ ಚುನಾವಣೆಯ ನಂತರ ಮುಂದಿನ ವರ್ಷ ತೆಲಂಗಾಣದಲ್ಲಿ ಎಲೆಕ್ಷನ್ ನಡೆಯಲಿದೆ. ಇದೇ ವೇಳೆ ತಮಿಳುನಾಡಿನ ಕೆಲವು ಲೋಕಸಭಾ ಸ್ಥಾನಗಳ ಮೇಲೆಯೂ ಪಕ್ಷ ಕಣ್ಣಿಟ್ಟಿದೆ. ಅದಕ್ಕಾಗಿ ಪ್ರಧಾನಿಗಳೇ ಈ ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ರಾಜ್ಯಗಳಲ್ಲಿ ಪಕ್ಷ ಬೇರೂರಲು ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಕರ್ನಾಟಕವನ್ನು ದಕ್ಷಿಣದ ರಾಜ್ಯಗಳ ಹೆಬ್ಬಾಗಿಲು ಎಂದು ಪಕ್ಷ ಪರಿಗಣಿಸುತ್ತದೆ.
ಅರುಣ್ಸಿಂಗ್ ಹೇಳಿಕೆ:ಈ ಹೊಸ ತಂತ್ರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕೇಳಿದಾಗ, ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಣಿ ಸಭೆಗಳು ನಡೆಯುವುದು ಖಚಿತ. ಚುನಾವಣೆಯ ಸಮಯದಲ್ಲಿ ಪ್ರಧಾನಿ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜನರು ಸಿಎಂ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಓದಿ:ಇಂದು ಭರ್ಜರಿ ರೋಡ್ ಶೋ ಮೂಲಕ ಸಿಎಂ ನಾಮಪತ್ರ ಸಲ್ಲಿಕೆ.. ಬೊಮ್ಮಾಯಿಗೆ ಸುದೀಪ್, ನಡ್ಡಾ ಸಾಥ್