ಬೆಂಗಳೂರು:ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ವಾಪಸ್ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿಗೆ ಹಿಂದುರಿಗಿದ ಬಳಿಕ ಅವರು ಮಾಜಿ ಸಿಎಂ ಹಾಗೂ ರಾಜ್ಯ ಬಿಜೆಪಿ ವರಿಷ್ಠ ನಾಯಕ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಬಿಎಸ್ವೈ ಭೇಟಿಯ ನಂತರ ಮಾತನಾಡಿದ ಅವರು, ''ಪ್ರಸ್ತುತ ನನ್ನ ಸ್ಪರ್ಧೆಯ ಅಗತ್ಯತೆಯನ್ನು ಪಕ್ಷದ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಕೂಡ ನನಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಸಿಗಲಿದೆ'' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:'ಒಂದು ಕಡೆ ನಿಂತು ಗೆಲ್ಲುವುದೇ ಕಷ್ಟ, ನೀನೇಕೆ ಎರಡು ಕಡೆ ನಿಂತೆ?' ಸೋಮಣ್ಣಗೆ ಶ್ರೀನಿವಾಸ್ ಪ್ರಸಾದ್ ಪ್ರಶ್ನೆ!
ಸುದೀರ್ಘ ಮಾತುಕತೆ:ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆ ಕುಮಾರ ಪಾರ್ಕ್ನಲ್ಲಿರುವ ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ಜಗದೀಶ್ ಶೆಟ್ಟರ್ ಆಗಮಿಸಿದರು. ಯಡಿಯೂರಪ್ಪರನ್ನು ಭೇಟಿ ಮಾಡಿ ಹೈಕಮಾಂಡ್ ನಾಯಕರ ಜೊತೆಗಿನ ಮಾತುಕತೆ ಕುರಿತ ವಿವರ ಪಡೆದುಕೊಂಡರು. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲೇ ಬೇಕು ಎಂದುಕೊಂಡಿದ್ದೇನೆ ಎನ್ನುವ ತಮ್ಮ ಅಪೇಕ್ಷೆಯನ್ನು ಬಿಎಸ್ವೈ ಮುಂದೆಯೂ ವ್ಯಕ್ತಪಡಿಸಿದರು. ಇಬ್ಬರು ನಾಯಕರು ಕೆಲಕಾಲ ಮಾತುಕತೆ ನಡೆಸಿದರು.
ಇದನ್ನೂ ಓದಿ:ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ವಿತರಣೆ: ನೊಣವಿನಕೆರೆ ಅಜ್ಜಯ್ಯನಿಗೆ ವಂದಿಸಿ ಕಾರ್ಯ ಆರಂಭಿಸಿದ ಡಿಕೆಶಿ
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ''ನಾನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಮಾತುಕತೆ ನಡೆಸಬೇಕು ಬನ್ನಿ ಅಂತಾ ಕರೆದಿದ್ದರು. ಹಾಗಾಗಿ ದೆಹಲಿಗೆ ಹೋಗಿದ್ದೆ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದ್ದೇನೆ. ಜಗದೀಶ್ ಶೆಟ್ಟರ್ ಕೇವಲ ಒಂದು ಭಾಗಕ್ಕೆ ಸೀಮಿತ ಆಗಿಲ್ಲ. ಕಿತ್ತೂರು ಕರ್ನಾಟಕದ ಎಲ್ಲಾ ಭಾಗಕ್ಕೆ ಶೆಟ್ಟರ್ ಅವಶ್ಯಕತೆಯಿದೆ ಅನ್ನೋದನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ'' ಎಂದರು.
ಇದನ್ನೂ ಓದಿ:ಗುರುಮಠಕಲ್ ಲಲಿತಾಗೆ ಬಿಜೆಪಿ ಟಿಕೆಟ್: ಕಣ್ಣೀರಿಟ್ಟ ನಾಗರತ್ನ ಕುಪ್ಪಿ
''ದೆಹಲಿ ಸಭೆ ಬಗ್ಗೆ ಯಡಿಯೂರಪ್ಪ ಅವರಿಗೆ ತಿಳಿಸಬೇಕಿತ್ತು ಹಾಗಾಗಿ ಬಂದಿದ್ದೇನೆ. ಎಲ್ಲಾ ಒಳ್ಳೆಯದಾಗುವ ವಿಶ್ವಾಸ ಇದೆ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ಇದೆ. ಯಡಿಯೂರಪ್ಪ ಕೂಡ ನೀವು ಆ ಭಾಗದಲ್ಲಿ ಪಕ್ಷ ಕಟ್ಟಿ ಬೆಳೆಸಿದವರು. ನಿಮಗೆ ಟಿಕೆಟ್ ಸಿಗಲಿದೆ. ವರಿಷ್ಠರಿಗೂ ನಾನು ಇದನ್ನೇ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಸ್ಪರ್ಧೆ ಮಾಡುತ್ತೇನೆ, ಅವಕಾಶ ಕೊಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಿದ್ದೇನೆ. ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಡಲೇ ಬೇಕು ಅಂತಾ ಪ್ರಮುಖರಿಗೆ ಹೇಳಿದ್ದಾರೆ, ಹಾಗಾಗಿ ಟಿಕೆಟ್ ಸಿಗಲಿದೆ'' ಎಂದು ಅವರು ಇದೇ ವೇಳೆ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಿಜೆಪಿ ಗೆಲುವಿಗಾಗಿ ಕಾವೇರಿ ಮೊರೆಹೋದ ಕೆ.ಜಿ.ಬೋಪಯ್ಯ