ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುವುದು ಖಚಿತ ಎಂದು ವಿಶ್ವಾಸದ ಮಾತುಗಳನ್ನು ಆಡಿದ ಎಚ್ಡಿ ಕುಮಾರಸ್ವಾಮಿ ಕನಸು ನನಸಾಗುವುದು ಬಹುತೇಕ ಅನುಮಾನ ಎಂಬುದು ಮುನ್ನಡೆಯ ಫಲಿತಾಂಶವನ್ನು ಗಮನಿಸಿದಾಗ ತಿಳಿಯುತ್ತಿದೆ. ಈ ನಡುವೆ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ತಮ್ಮನ್ನು ಇದುವರೆಗೂ ಯಾರು ಸಂಪರ್ಕಿಸಿಲ್ಲ. ನಮ್ಮದು ಸಣ್ಣ ಪಕ್ಷ. ನನ್ನಿಂದ ಯಾವುದೇ ಬೇಡಿಕೆ ಇಲ್ಲ. ಉತ್ತಮ ಅಭಿವೃದ್ಧಿಯ ಭರವಸೆಯಲ್ಲಿ ನಾನು ಇದ್ದೇನೆ. ಇಲ್ಲಿಯವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಅಂತಿಮ ಫಲಿತಾಂಶಗಳನ್ನು ಕಾದು ನೋಡೋಣ ಎಂದಿದ್ದಾರೆ.
ರಾಮನಗರದಲ್ಲಿ ಚುನಾವಣೆಗೆ ಮುನ್ನ ಮತಚಲಾವಣೆ ಮಾಡಿ ಮಾತನಾಡಿದ ಕುಮಾರಸ್ವಾಮಿ ಅವರು, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಸರಳ ಬಹುಮತದತ್ತ ದಾಪುಗಾಲು ಇಟ್ಟಿದ್ದು, ಜೆಡಿಎಸ್ ಅನ್ನು ಓಲೈಸುವ ಕಸರತ್ತನ್ನು ಕೈ ಬಿಟ್ಟಿದೆ. ಬದಲಾಗಿ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ನಡೆಸಲು ಮುಂದಾಗಿದೆ. ಈ ಮೂಲಕ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ಬರುವುದಿಲ್ಲ. ಈ ಹಿನ್ನಲೆ ತಾವು ಕಿಂಗ್ ಆಗಲಿದ್ದೇವೆ ಎಂಬ ಜೆಡಿಎಸ್ ನಂಬಿಕೆ ಹುಸಿಯಾಗಿದೆ.
ಚುನಾವಣೋತ್ತರ ಫಲಿತಾಂಶದಲ್ಲಿ ಜೆಡಿಎಸ್ 37 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂಬ ಅಂಕಿ ಅಂಶಗಳು ಬಿತ್ತರವಾಗಿದ್ದವು. 2018ರಲ್ಲೂ ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಕಂಡು, ಕಾಂಗ್ರೆಸ್ ಜೊತೆಗೆ ಮೈತ್ರಿ ನಡೆಸಿತು. ಈ ಲೆಕ್ಕಾಚಾರದ ಹಿನ್ನಲೆ ಈ ಬಾರಿ ಕೂಡ ಅತಂತ್ರ ಫಲಿತಾಂಶ ರಚನೆಯಾಗಲಿದ್ದು, ತಮ್ಮ ನೆರವು ಬೇಕಾಗಬಹುದು ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಇತ್ತು. ಆದರೆ, ಇದೀಗ ಚುನಾವಣೆ ಫಲಿತಾಂಶಗಳು ಇವುಗಳನ್ನು ಹುಸಿಗೊಳಿಸುತ್ತಿದೆ.