ಕರ್ನಾಟಕ

karnataka

ETV Bharat / assembly-elections

ಸಂಪುಟ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕ: ಹೆಚ್​ಡಿಕೆ - Reservation for Lingayat community

ಸರ್ಕಾರದ ಸಂಪುಟ ಸಭೆ ಮತ್ತು ಮೀಸಲಾತಿ ವಿಚಾರ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.

HD Kumaraswamy
ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

By

Published : Mar 25, 2023, 3:42 PM IST

ಬೆಂಗಳೂರು:ಸಂಪುಟ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕ. ಪಾಪದ ಪಾಶ ಬಿಜೆಪಿಯ ಬೆನ್ನುಬಿದ್ದಿದೆ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಪ್ರತಿಯೊಂದರಲ್ಲಿಯೂ ರಾಜಕೀಯ ಮಾಡುತ್ತಿದೆ. ಪ್ರತಿಯೊಂದರಲ್ಲಿಯೂ ಚುನಾವಣೆಯನ್ನೇ ಕಾಣುತ್ತದೆ. ಸಂಪುಟದಲ್ಲಿ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕವಾಗಿದೆ. ಕೊಡಲು ಕೈ ಬಾರದು, ಕೊಡಲೂ ಆಗದು. ಹಣೆಗೆ ಮಣೆಯಿಂದ ಬಾರಿಸಿಕೊಳ್ಳುವುದೂ ಎಂದರೆ ಇದೆ. ಪಾಪದ ಪಾಶ ಬಿಜೆಪಿಯ ಬೆನ್ನುಬಿದ್ದಿದೆ. ಚುನಾವಣೆ ಎಂಬ ಚದುರಂಗದಾಟದಲ್ಲಿ ಬಿಜೆಪಿಯು ಬಿಸಿಲು ಕುದುರೆ ಮೇಲೆ ಸವಾರಿ ಮಾಡುತ್ತಿದೆ. ಅಷ್ಟೇ ಅಲ್ಲ, ಕ್ರೂರ ವ್ಯಾಘ್ರನ ಮೇಲೂ ಕುಳಿತು ಕುರುಡಾಗಿ ಸರ್ಕಸ್‌ ಮಾಡುತ್ತಿದೆ. ಸಾಗು, ಇಲ್ಲವೇ ಹೋಗು ಎನ್ನುವ ದುಃಸ್ಥಿತಿಯಲ್ಲಿ ತೋಯ್ದಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಮೀಸಲು ಕಳ್ಳಾಟವಾಡಿದ ಬಿಜೆಪಿ-ಹೆಚ್​ಡಿಕೆ:ಮತದ ಹೆಸರಿನಲ್ಲಿ ಮತಯುದ್ಧ ಗೆಲ್ಲಬಹುದೆಂದು ಚಟಕ್ಕೆ ಬಿದ್ದಿರುವ ಬಿಜೆಪಿ ಈಗ ಎಲ್ಲಾ ಜನರ ಕಲ್ಯಾಣದ ಪ್ರತೀಕವಾದ ಕರ್ನಾಟಕದಲ್ಲಿ ಮೀಸಲು ಕಳ್ಳಾಟ ಆಡಿದೆ. ಗೆಲ್ಲಲೇಬೇಕು, ಗೆಲ್ಲದಿದ್ದರೆ ಇನ್ನೊಬ್ಬರ ತಟ್ಟೆಗೆ ಕೈ ಹಾಕು, ಆಗದಿದ್ದರೆ ಕಸಿದುಕೋ. ಇದೇ ಕಮಲ ಪಕ್ಷದ ಕುಟಿಲತೆ. ಮೂರೂವರೆ ವರ್ಷದಿಂದ ಗಾಳಿಯಲ್ಲಿ ಗಾಳಿಪಟ ಹಾರಿಸಿಕೊಂಡೇ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದ್ದ ಬಿಜೆಪಿ. ಚುನಾವಣೆ ಗಿಮಿಕ್​ನ ಸಂಪುಟ ಸಭೆಯಲ್ಲಿ ಮೀಸಲಾತಿ ತುಪ್ಪವನ್ನು ಜನರ ಹಣೆಗೆ ಸವರುವ ಬೂಟಾಟಿಕೆ ನಡೆಸಿದೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಹೊರಟಿದೆ'' ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಅಂಡಬೇಡ್ಕರ್​ ಆಶಯಕ್ಕೆ ಶಾಶ್ವತ ಸಮಾಧಿ- ಕುಮಾರಸ್ವಾಮಿ:ಒಬ್ಬರ ಅನ್ನ ಕಸಿದುಕೊಂಡು ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎನ್ನುವ ಬಿಜೆಪಿಗರ ರಕ್ಕಸ ಚಾಳಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯಕ್ಕೆ ಶಾಶ್ವತ ಸಮಾಧಿ ಕಟ್ಟುವಂತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದವರ ನಡುವಳಿಕೆ ಇದು. ಮೀಸಲು ಕೊಡುವುದು ತಪ್ಪಲ್ಲ, ಆದರೆ, ತನ್ನ ಹಿಡೆನ್‌ ಅಜೆಂಡಾವನ್ನು ಮೀಸಲಾತಿಯೊಳಕ್ಕೂ ನುಸುಳಿಸಿದ ಬಿಜೆಪಿ ನರಿ ರಾಜಕಾರಣ ಆಘಾತಕಾರಿ. ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ ಕರ್ನಾಟಕವನ್ನು ಮೀಸಲಾತಿ ಮೂಲಕವೇ ವಿಭಜಿಸಿ ಮತ ಫಸಲು ತೆಗೆದುಕೊಳ್ಳುವ ದುರಾಲೋಚನೆಯೊಂದಿಗೆ ಬಿಜೆಪಿ, ಸಾಮಾಜಿಕ ನ್ಯಾಯಕ್ಕೆ ಚಟ್ಟ ಕಟ್ಟಿ ಸ್ಮಶಾನ ಕೇಕೆ ಹಾಕುತ್ತಿದೆ ಎಂದು ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಪಾಪದ ಕೊಡ ಭರ್ತಿ- ಹೆಚ್​ಡಿಕೆ:ಒಳಮೀಸಲಾತಿ ಎನ್ನುವುದು ಒಡೆಯಲಾಗದ ಕಗ್ಗಂಟೇನಲ್ಲ. ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲವಷ್ಟೇ. ಆದರೆ, ಚುನಾವಣೆ ಹೊತ್ತಿನಲ್ಲಿ ಜಾತಿ ಜಾತಿಗಳ ನಡುವೆ ವೈಮನಸ್ಸು ತಂದು ಉರಿಯುವ ಕಿಚ್ಚಿನಲ್ಲಿ ಚಳಿ ಕಾಯಿಸಿಕೊಳ್ಳಬೇಕು ಎನ್ನುವುದೇ ಬಿಜೆಪಿಯ ಅಸಲಿ ಆಟ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ. ಬಿಜೆಪಿಯ ಪಾಪದ ಕೊಡ ಭರ್ತಿ ಆಗಿದೆ. ರಾಜ್ಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ, ಜಾತಿ ಜಗಳಕ್ಕೆ ತುಪ್ಪ ಸುರಿಯುತ್ತಿದೆ. ಅರಗಿನ ಮನೆಯಲ್ಲಿ ಪಾಂಡವರಿಗೆ ಕೊಳ್ಳಿ ಇಡಲು ಹೋಗಿ ಮುಂದೊಮ್ಮೆ ತಾವೇ ಎಸಗಿದ ಪಾಪಕುಂಡದಲ್ಲಿ ಬೆಂದುಹೋದ ಕೌರವರಂತೆ, ಬಿಜೆಪಿಗರು ಮದವೇರಿ ಮೆರೆಯುತ್ತಿದ್ದಾರೆ. ಉರಿಯುತ್ತಿರುವ ಜನರ ಒಡಲು ತಣ್ಣಗಾಗುವುದಿಲ್ಲ, ಇದು ನೆನಪಿರಲಿ ಎಂದು ಎಚ್​​ಡಿಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಫೈಟರ್​​ ಯಾರು?: ಗುಟ್ಟು ಬಿಟ್ಟುಕೊಡದ ಕಾಂಗ್ರೆಸ್

ABOUT THE AUTHOR

...view details