ಬೆಂಗಳೂರು :ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಎಲ್ಲ ಪಕ್ಷಗಳಿಂದ ಅಥವಾ ಪಕ್ಷೇತರರಾಗಿ ಒಟ್ಟು 2615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ಗಳನ್ನು ದೆಹಲಿಯ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ಪರಿಶೀಲನೆಗೆ ಒಳಪಡಿಸಿದೆ. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ, ಹಣಕಾಸು ಹಿನ್ನೆಲೆ, ಅವರ ಶೈಕ್ಷಣಿಕ ಅರ್ಹತೆ ಹೀಗೆ ಹಲವಾರು ಮಾಹಿತಿಗಳನ್ನು ಕ್ರೋಢೀಕರಿಸಿ ಎಡಿಆರ್ ವರದಿಯೊಂದನ್ನು ತಯಾರಿಸಿದೆ. ಈ ವರದಿಯ ಪ್ರಕಾರ ರಾಜ್ಯದಲ್ಲಿ ಚುನಾವಣಾ ಕಣದಲ್ಲಿರುವ ವಿವಿಧ ಪಕ್ಷಗಳ ಅಥವಾ ಪಕ್ಷೇತರರಾಗಿರುವ ಒಟ್ಟು 581 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳ ಪಕ್ಷವಾರು ಅಂಕಿ ಸಂಖ್ಯೆ ಹೀಗಿದೆ: ಎಡಿಆರ್ ಸಂಸ್ಥೆಯು ಕಣದಲ್ಲಿರುವ 2,615 ಅಭ್ಯರ್ಥಿಗಳ ಪೈಕಿ 2586 ಅಭ್ಯರ್ಥಿಗಳ ಅಫಿಡವಿಟ್ಗಳನ್ನು ಅಧ್ಯಯನ ಮಾಡಿದೆ. 29 ಅಭ್ಯರ್ಥಿಗಳ ಅಫಿಡವಿಟ್ಗಳು ಸ್ಪಷ್ಟವಾಗಿಲ್ಲದ ಕಾರಣದಿಂದ ಅಥವಾ ಅದರಲ್ಲಿ ಕೆಲವರ ಅಫಿಡವಿಟ್ಗಳು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿಲ್ಲದ ಕಾರಣದಿಂದ ಅವನ್ನು ಪರಿಶೀಲನೆಗೆ ಒಳಪಡಿಸಲಾಗಿಲ್ಲ ಎಂದು ಎಡಿಆರ್ ವರದಿಯಲ್ಲಿ ಹೇಳಿದೆ.
ರಾಷ್ಟ್ರೀಯ ಪಕ್ಷಗಳ 795, ರಾಜ್ಯ ಮಟ್ಟದ ಪಕ್ಷಗಳ 256, ನೋಂದಾಯಿತ ಆದರೆ, ಮಾನ್ಯತೆ ಪಡೆಯದ ಪಕ್ಷಗಳ 647, ಪಕ್ಷೇತರರಾಗಿ 947 ಹೀಗೆ ಒಟ್ಟು 2615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳ 269 (ಶೇ 34), ರಾಜ್ಯಮಟ್ಟದ ಪಕ್ಷಗಳ 83 (ಶೇ 33), ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ 110 (ಶೇ 17) ಹಾಗೂ ಪಕ್ಷೇತರರಾಗಿರುವ 119 (ಶೇ 13) ಹೀಗೆ ಒಟ್ಟು 581 (ಶೇ 22) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.
ಕ್ರಿಮಿನಲ್ ಮೊಕದ್ದಮೆ ಹೊಂದಿರುವ ರಾಷ್ಟ್ರೀಯ ಪಕ್ಷಗಳ 256 ಅಭ್ಯರ್ಥಿಗಳ ಪೈಕಿ 165 ಜನ ಗಂಭೀರ ಸ್ವರೂಪದ ಕ್ರಿಮಿನಲ್ ಆಪಾದನೆಗಳನ್ನು ಎದುರಿಸುತ್ತಿದ್ದಾರೆ. ಹಾಗೆಯೇ ರಾಜ್ಯಮಟ್ಟದ ಪಕ್ಷಗಳ 62, ನೋಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷಗಳ 87 ಹಾಗೂ ಪಕ್ಷೇತರರ ಪೈಕಿ 90 ಜನ ಹೀಗೆ ಒಟ್ಟು 404 ಜನ ಗಂಭೀರ ಕ್ರಿಮಿನಲ್ ಆಪಾದನೆ ಹೊಂದಿದ್ದಾರೆ.
ಕಳೆದ ಚುನಾವಣೆಗೆ ಹೋಲಿಕೆ: ಈ ಬಾರಿ 2023ರ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಒಟ್ಟು 581 (ಶೇ 22) ಜನ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 2018ರ ಚುನಾವಣೆಗೆ ಹೋಲಿಸಿದರೆ- ಆಗ ಕಣದಲ್ಲಿದ್ದ 2560 ಅಭ್ಯರ್ಥಿಗಳ ಪೈಕಿ 391 (ಶೇ 15) ಜನ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಘೋಷಿಸಿಕೊಂಡಿದ್ದರು. ಅಂದರೆ, ಈ ಬಾರಿ ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಭ್ಯರ್ಥಿಗಳ ಪ್ರಮಾಣ ಹೆಚ್ಚಾಗಿರುವುದು ಕಂಡು ಬರುತ್ತದೆ. ಈ ಬಾರಿ 404 (ಶೇ ಶೇ 16) ರಷ್ಟು ಜನ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಆಪಾದನೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 2018 ರಲ್ಲಿ ಈ ಸಂಖ್ಯೆ 254 (ಶೇ 10) ಆಗಿತ್ತು.
ಪಕ್ಷವಾರು ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪರಿಶೀಲನೆ ಮಾಡಲಾದ 221 ರ ಪೈಕಿ 122 (ಶೇ 55), ಬಿಜೆಪಿಯ 224 ಅಭ್ಯರ್ಥಿಗಳ ಪೈಕಿ 96 (ಶೇ 43), ಜೆಡಿಎಸ್ನ 208 ಅಭ್ಯರ್ಥಿಗಳ ಪೈಕಿ 70 (ಶೇ 34) ಮತ್ತು ಆಮ್ ಆದ್ಮಿ ಪಾರ್ಟಿಯ 208 ಅಭ್ಯರ್ಥಿಗಳ ಪೈಕಿ 48 (ಶೇ 23) ಜನ ಕ್ರಿಮಿನಲ್ ಮೊಕದ್ದಮೆ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.