ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ವಿತರಣೆ: ನೊಣವಿನಕೆರೆ ಅಜ್ಜಯ್ಯನಿಗೆ ವಂದಿಸಿ ಕಾರ್ಯ ಆರಂಭಿಸಿದ ಡಿಕೆಶಿ ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಆರಂಭಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಡಿಕೆಶಿ ರಾಹುಕಾಲ ಕಳೆದ ಬಳಿಕ 2023 ನೇ ಸಾಲಿನ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಬಿ ಫಾರಂ ವಿತರಣೆ ಪ್ರಾರಂಭಿಸಿದರು. ಮೊದಲ ಬಿ ಫಾರಂ ಭೈರತಿ ಸುರೇಶ್ ಅವರಿಗೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಂತರ ಉಳಿದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದರು.
ಕುರುಬ ಸಮುದಾಯಕ್ಕೆ ಸೇರಿದ ಭೈರತಿ ಸುರೇಶ್ಗೆ ಮೊದಲ ಬಿ ಫಾರಂ ವಿತರಿಸಲಾಯಿತು. ಬಿ ಫಾರಂ ನೀಡುವ ಸಂದರ್ಭದಲ್ಲಿ ನೊಣವಿನಕೆರೆ ಅಜ್ಜಯ್ಯ ಫೋಟೋಗೆ ನಮಿಸಿ ವಿತರಣೆ ಆರಂಭಿಸಿದರು. ಬಿ ಫಾರಂ ಹಿಡಿದುಕೊಂಡು ಪ್ರಾರ್ಥನೆ ಮಾಡಿದ ಡಿಕೆ ಶಿವಕುಮಾರ್ ನಂತರ ಬೈರತಿ ಸುರೇಶ್ಗೆ ವಿತರಿಸಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿದರು. ಬಳಿಕ ಮಹಾಲಕ್ಷ್ಮಿ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ಎಸ್ ಕೇಶವ ಮೂರ್ತಿಗೆ ಬಿ ಫಾರಂ ನೀಡಲಾಯಿತು.
ಇಂದು ಇದೇ ಸಂದರ್ಭ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪಗೆ ಬಿ ಫಾರಂ ನೀಡಿದರು. ಇದೇ ಸಂದರ್ಭ ಕುಸುಮಾ ಹನುಮಂತರಾಯಪ್ಪ ಡಿಕೆ ಶಿವಕುಮಾರ್ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಗಾಂಧಿನಗರದಿಂದ ಈ ಸಾರಿಯೂ ಕಣಕ್ಕಿಳಿದಿದ್ದು, ಡಿಕೆಶಿ ಅವರಿಗೂ ಬಿ ಫಾರಂ ನೀಡಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಬೈರತಿ ಸುರೇಶ್, ಅನೂಪ್ ಅಯ್ಯಂಗಾರ್, ಮಹಾಲಕ್ಷ್ಮಿಲೇಔಟ್ ಕೇಶವ ಮೂರ್ತಿ, ಕುಸುಮಾ ಹನುಮಂತರಾಯಪ್ಪ, ಬಾಲರಾಜ್ ಗೌಡ, ಯುಬಿ ವೆಂಕಟೇಶ್ ತಮ್ಮ ಬಿ ಫಾರ್ಮ್ಗಳನ್ನು ಸ್ವೀಕರಿಸಿದರು.
2023ನೇ ಸಾಲಿನ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 124 ಹಾಗೂ ನಂತರ 42 ಅಭ್ಯರ್ಥಿಗಳನ್ನು ಒಳಗೊಂಡ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಮೂರನೇ ಪಟ್ಟಿ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಇಂದಿನಿಂದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಒಂದೇ ಬಾರಿ ಒತ್ತಡ ಉಂಟಾಗದಿರಲಿ ಎಂಬ ಉದ್ದೇಶದಿಂದ ಹಂತ ಹಂತವಾಗಿ ಬಿ ಫಾರಂ ವಿತರಣೆಯನ್ನು ಡಿ ಕೆ ಶಿವಕುಮಾರ್ ಆರಂಭಿಸಿದ್ದಾರೆ.
ದಿನೇಶ್ ಗುಂಡೂರಾವ್ ಮಾತನಾಡಿ, ಸೋಮವಾರ, ಮಂಗಳವಾರ ನಾಮಿನೇಷನ್ ಪೈಲ್ ಮಾಡುತ್ತೇನೆ. ರಾಹು ಕಾಲ ಅದನೆಲ್ಲ ನಾವು ನೋಡುವುದಿಲ್ಲ. ಆದ್ರೂ ನೋಡುವವರು ಇರ್ತಾರೆ. ನಾನೇನು ವಾರ ಅವುಗಳನ್ನು ನೋಡುವುದಿಲ್ಲ. ನನ್ನ ಕ್ಷೇತ್ರಗಳಲ್ಲಿ ಯಾವುದೇ ಫೈಟ್ ಇಲ್ಲ. ಕ್ಷೇತ್ರದಲ್ಲಿ ಒಳ್ಳೆ ವಾತಾವರಣವಿದೆ. ಮೊದಲ ಸ್ಥಾನದಲ್ಲಿ ನಾನು ಬರುತ್ತೇನೆ. ಎರಡನೇ ಸ್ಥಾನದಲ್ಲಿ ಯಾರು ಬರುತ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಶವ್ ಮೂರ್ತಿ ಮಾತನಾಡಿ, ಇವತ್ತು ಅಧ್ಯಕ್ಷರು ಬಿ ಪಾರಂ ಕೊಟ್ಟಿದ್ದಾರೆ. ಸೋಮವಾರ ನಾಮ ಪತ್ರ ಸಲ್ಲಿಸುತ್ತೇನೆ. ಮಹಾಲಕ್ಷ್ಮಿ ಲೇಔಟ್ನಲ್ಲಿ ಪ್ರಬಲ ಅಭ್ಯರ್ಥಿ ಇಲ್ಲ ಎಂಬುದು ಸುಳ್ಳು ಸುದ್ದಿ. ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಖಂಡಿತವಾಗಿ ಮಹಾಲಕ್ಷ್ಮಿ ಲೇಔಟ್ನಲ್ಲಿ ಗೆಲುವು ಕಾಣುತ್ತೆ. ರಾಹುಲ್ ಗಾಂಧಿ ಅವರ ಗ್ಯಾರಂಟಿ ಕಾರ್ಡ್ಗಳು ಕೈ ಹಿಡಿಯುತ್ತವೆ. ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಆಗಿವೆ. ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಬಿಗಿ ವಾತಾವರಣ ಇದೆ. ಅದನ್ನು ಸಾಮಾನ್ಯ ಸ್ಥಿತಿಗೆ ತರಬೇಕು. ಪಾರ್ಕ್ ನೀರಿನ ವ್ಯವಸ್ಥೆ ಯಾವುದೂ ಸರಿಯಿಲ್ಲ. ಅವುಗಳನ್ನು ಸರಿ ಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ:ಸ್ಪೀಕರ್ ಕಾಗೇರಿ ಸೇರಿ 22 ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದ ಕಟೀಲ್