ವಿಜಯಪುರ:ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ. 2018 ರ ಚುನಾವಣೆಯಲ್ಲಿ ಬಿಜೆಪಿಯ ಸೋಮನಗೌಡ ಪಾಟೀಲ್ ಸಾಸನೂರ್ ಅವರು ಸುಲಭವಾಗಿ ಜಯ ಸಾಧಿಸಿದ್ದರು. ಈ ಬಾರಿ ಪಾಟೀಲರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಟಕ್ಕರ್ ನೀಡಲಿದ್ದಾರೆ.
ದೇವರ ಹಿಪ್ಪರಗಿ ಮತಕ್ಷೇತ್ರದ ಹಾಲಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದಾರೆ. ಆದರೂ, ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಕೂಡ ಅಷ್ಟೇ ಅಬ್ಬರ ಹೊಂದಿದೆ. ಕಾಂಗ್ರೆಸ್ನಿಂದ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿಲ್ಲವಾದರೂ, ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಜೆಡಿಎಸ್ ಈಗಾಗಲೇ ಅಭ್ಯರ್ಥಿಯ ಘೋಷಣೆ ಮಾಡಿದ್ದು, ರಾಜುಗೌಡ ಪಾಟೀಲ ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದಾರೆ.
2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಪರವಾಗಿ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ 3,353 ಅಲ್ಪ ಮತಗಳಿಂದ ರಾಜುಗೌಡ ಪಾಟೀಲ್ ಬಿಜೆಪಿ ಮುಂದೆ ಸೊಲೊಪ್ಪಿಕೊಂಡಿದ್ದರು.
ಈ ಬಾರಿ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. 9 ಮಂದಿ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಪ್ರಮುಖವಾಗಿ 2018 ರಲ್ಲಿ ಸ್ಪರ್ಧೆ ಮಾಡಿದ್ದ ಬಿ.ಎಸ್.ಪಾಟೀಲ ಯಾಳಗಿ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿ.ಪಂ ಸದಸ್ಯೆ ಮಾಜಿ ಗೌರಮ್ಮ ಮುತ್ತತ್ತಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ ವಡವಡಗಿ ಆಕಾಂಕ್ಷಿಗಳಾಗಿದ್ದಾರೆ.
ಇಲ್ಲಿಯವರೆಗೆ ರೆಡ್ಡಿ ಸಮುದಾಯದ ಶಾಸಕರೇ ಹೆಚ್ಚಾಗಿ ಆಯ್ಕೆಯಾದ ಕಾರಣ, ಕಾಂಗ್ರೆಸ್ ಪಕ್ಷದಲ್ಲಿ ರೆಡ್ಡಿ ಸಮುದಾಯದ ಜೊತೆಗೆ ಹಾಲುಮತ ಸಮುದಾಯದವರಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.