ರಾಮನಗರ:ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆಗೆ ರಾಮನಗರ ಜಿಲ್ಲೆಗೆ ಸಲ್ಲುತ್ತದೆ. ರಾಜ್ಯ ರಾಜಕೀಯದ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಮುಖ್ಯಮಂತ್ರಿ ಅಲ್ಲದೇ ಹಲವು ಘಟನಾವಳಿಗಳನ್ನು ನೀಡಿದ ಶ್ರೇಯಸ್ಸು ಕೂಡ ಇದೇ ಜಿಲ್ಲೆಗೆ ಸೇರುತ್ತದೆ. ಹಾಗಾಗಿ ರೇಷ್ಮೆ ನಗರಿ ರಾಮನಗರ ಜಿಲ್ಲೆಗೆ ತನ್ನದೇಯಾದ ರಾಜಕೀಯ ಹಿನ್ನೆಲೆ ಇದೆ. ಅದೇ ಕ್ಷೇತ್ರದಲ್ಲಿ ಇದೀಗ ವಿಧಾನಸಭಾ ಚುನಾವಣೆ ಕಹಳೆ ಮೊಳಗಿದ್ದು ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸದ್ಯ ಹಿಡಿತ ಸಾಧಿಸಿದ್ದು, ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ. ಇದರ ನಡುವೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಇನ್ನಿಲ್ಲದ ಪ್ರಯತ್ನ ನಡೆಸಿದೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ತವರು ಕ್ಷೇತ್ರವಾದ ಇಲ್ಲಿ ಸದ್ಯ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿ. ಬರುವ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಮುಂದಾಗಿದ್ದು, ನಿಖಿಲ್ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿವೆ.
ಜೆಡಿಎಸ್ ಪ್ರಾಬಲ್ಯ: ಕಳೆದ ಬಾರಿ ರಾಮನಗರ-ಚನ್ನಪಟ್ಟಣ ಎರಡು ಕಡೆ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ, ಗೆದ್ದ ನಂತರ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಸಮ್ಮಿಶ್ರ ಸರ್ಕಾರ ರಚನೆ ನಂತರ ಪತ್ನಿ ಅನಿತಾ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಲ್ಲದೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಇತ್ತೀಚೆಗೆ ನಡೆಸಿದ ಪಂಚರತ್ನ ಯಾತ್ರೆ ವೇಳೆ 'ನಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕುವೆ' ಎಂದು ಹೇಳುವ ಮೂಲಕ ರಾಮನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದರು. ಟಿಕೆಟ್ ಘೋಷಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ನಿಂದ ಇಕ್ಬಾಲ್ ಹುಸೇನ್ ಕಣಕ್ಕಿಳಿಯಲಿದ್ದು, ಬಿಜೆಪಿಯಿಂದ ಗೌತಮ್ ಗೌಡ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ದೆ ನಡೆಯಲಿದೆ.
ಕಾಂಗ್ರೆಸ್ ಬಲಾಬಲ: ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿ ಪ್ರಬಲ ಪೈಪೋಟಿ ನೀಡಿ 20 ಸಾವಿರ ಮತಗಳಿಂದ ಸೋಲನುಭವಿಸಿದ್ದ ಇಕ್ಬಾಲ್ ಹುಸೇನ್, ಈ ಬಾರಿ ಗೆಲ್ಲುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿರುವ ಅವರು, ಸೋಲಿನ ಸೇಡು ತೀರಿಸಿಕೊಳ್ಳುವ ಛಲದಲ್ಲಿದ್ದಾರೆ. ಕೋವಿಡ್ ವೇಳೆ ಕ್ಷೇತ್ರದ ಜನರ ಜೊತೆಗೆ ಇದ್ದು ಫುಡ್ ಕಿಟ್, ಔಷಧಿಗಳ ಕಿಟ್ ಸೇರಿದಂತೆ ಇತರೆ ಸಮಾಜಸೇವೆ ಮಾಡುವ ಮೂಲಕ ಕ್ಷೇತ್ರದ ಜನರ ಜೊತೆ ನಿಂತಿದ್ದು ಅವರಿಗೆ ಬಲ ತರಿಸಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಪ್ರೀತಿಗೂ ಪಾತ್ರರಾಗಿದ್ದಾರೆ. ಪಕ್ಷದ ಮುಖಂಡರೆಲ್ಲ ತಮ್ಮ ಮುನಿಸನ್ನು ಬಿಟ್ಟು ಇಕ್ಬಾಲ್ ಹುಸೇನ್ ಕೈಹಿಡಿಯುವುದಾಗಿ ಹೇಳಿದ್ದು, ಅವರಿಗೆ ವರದಾನವಾಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಿಜೆಪಿ ಟಾರ್ಗೆಟ್: ಇನ್ನು, ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಎಡವಿದ್ದ ಬಿಜೆಪಿ, ಈ ಬಾರಿ ಉತ್ಸಾಹದೊಂದಿಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದೆ. ಹಳೆ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಮಲ ನಾಯಕರು, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಗೌತಮ್ ಗೌಡರಿಗೆ ಬಿಜೆಪಿ ಟಿಕೆಟ್ ನೀಡುವ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಸಹ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ ಅವರು ಸಚಿವ ಅಶ್ವತ್ಥನಾರಾಯಣ ಜೊತೆಗೂಡಿ ಈಗಾಗಲೇ ಕ್ಷೇತ್ರದಾದ್ಯಂತ ಓಡಾಟ ನಡೆಸಿದ್ದಾರೆ. ಹಾಗಾಗಿ ಮೂರು ಪಕ್ಷಗಳಿಂದ ರಾಜಕೀಯ ಲೆಕ್ಕಾಚಾರ ಜೋರಾಗಿರುವುದರಿಂದ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.