ರಾಮನಗರ:ಮಾಗಡಿ ತಾಲೂಕು ನಾಡಪ್ರಭು ಕೆಂಪೇಗೌಡರು ಹುಟ್ಟಿದ ಐತಿಹಾಸಿಕ ಸ್ಥಳ ಒಳಗೊಂಡಿರುವ ವಿಧಾನಸಭಾ ಮತಕ್ಷೇತ್ರ. ಬೆಂಗಳೂರಿನಿಂದ ಕೂಗಳತೆ ದೂರದಲ್ಲಿದೆ. ಜೆಡಿಎಸ್ ಭದ್ರಕೋಟೆಯೂ ಹೌದು. ಕಾಂಗ್ರೆಸ್ ಮತ್ತು ಬಿಜೆಪಿ ಈ ಸೀಟಿಗಾಗಿ ಪೈಪೋಟಿ ನಡೆಸುತ್ತಿವೆ. ಸದ್ಯ ಮಾಗಡಿ ವಿಧಾನಸಭಾ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಪ್ರತಿಷ್ಠಿತ ರಾಜಕೀಯ ಕಣವಾಗಿದೆ.
ಕೇಂಪೇಗೌಡ ನಗರಿ ಎಂದೇ ಖ್ಯಾತಿ ಗಳಿಸಿರುವ ಮಾಗಡಿ ಕಳೆದ ಹಲವು ವರ್ಷಗಳಿಂದ ಜೆಡಿಎಸ್ನ ಭದ್ರಕೋಟೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ ತನ್ನದೇ ರಾಜಕೀಯ ಇತಿಹಾಸವನ್ನೂ ಹೊಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಜೆಡಿಎಸ್ನಲ್ಲಿದ್ದ ಶಾಸಕರಾಗಿದ್ದ ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಎ.ಮಂಜುನಾಥ್ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ದಾಖಲೆಯ 50 ಸಾವಿರಕ್ಕೂ ಮತಗಳ ಅಂತರದಿಂದ ಬಾಲಕೃಷ್ಣ ವಿರುದ್ಧ ಗೆಲುವು ಸಾಧಿಸಿದ್ದರು. ತಾಲೂಕಿನಲ್ಲಿ ಬಿಜೆಪಿಯ ಸಾವಿರಾರು ಮತಗಳಿದ್ದರೂ ಕೂಡ ಸೂಕ್ತ ಅಭ್ಯರ್ಥಿಯಿಲ್ಲದ ಕಾರಣ ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಬೇಕಾಯಿತು.
ಜೆಡಿಎಸ್-ಕಾಂಗ್ರೆಸ್ ನಡುವೆ ಬಿಜೆಪಿ ಪಾಲು:ಸಚಿವ ಅಶ್ವತ್ಥನಾರಾಯಣ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದರಿಂದ ಕ್ಷೇತ್ರದ ಗೆಲುವು ಬಿಜೆಪಿಗೆ ಅನಿವಾರ್ಯ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮಾಗಡಿ ಕ್ಷೇತ್ರಕ್ಕೆ ವಿಶೇಷ ಅನುದಾನ ತರುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೂ ಅಭಿವೃದ್ಧಿ ವಿಚಾರದಲ್ಲಿ ಅಪಸ್ವರ ಕೇಳಿ ಬರುತ್ತದೆ. ಕಳೆದ ಹಲವು ವರ್ಷಗಳಿಂದ ಜೆಡಿಎಸ್-ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ನಡೆಯುತ್ತಿತ್ತು. ಆದರೆ, 2023ರ ಚುನಾವಣೆಯನ್ನು ಗಮನಿಸಿದರೆ ಬಿಜೆಪಿ ಕೂಡ ಸ್ಪರ್ಧೆಯೊಡ್ಡಬಲ್ಲ ಸ್ಥಾನದಲ್ಲಿದೆ. ಬಿಜೆಪಿ ಅಭ್ಯರ್ಥಿಯ ಪ್ರಭಾವಕ್ಕಿಂತ ಅಶ್ವತ್ಥನಾರಾಯಣ ಪ್ರಭಾವವೇ ಕ್ಷೇತ್ರದಲ್ಲಿ ಹೆಚ್ಚು ಎಂದು ಹೇಳಲಾಗುತ್ತಿದೆ.
ಪಕ್ಷಗಳ ಬಲಾಬಲ:ಈ ಮೊದಲು ಹೇಳಿದಂತೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಪಕ್ಷಗಳು ಈಗಾಗಲೇ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಅವರು ಪ್ರಚಾರ ಕೂಡ ಆರಂಭಿಸಿದ್ದಾರೆ. ಜೆಡಿಎಸ್ನಿಂದ ಹಾಲಿ ಶಾಸಕ ಎ.ಮಂಜುನಾಥ್ ಕಣಕ್ಕಿಳಿಯುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಹೆಚ್.ಸಿ.ಬಾಲಕೃಷ್ಣ ಅವರಿಗೆ ಮಣೆ ಹಾಕಿದೆ. ಬಿಜೆಪಿ ಪಕ್ಷ ಪ್ರಸಾದ್ ಗೌಡ ಅವರಿಗೆ ಟಿಕೆಟ್ ಘೊಷಣೆ ಮಾಡಿದೆ. ರವಿಕಿರಣ್ ಎಂ.ಎನ್ ಎನ್ನುವವರು ಆಪ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷ ಹಾಗೂ ಅಭ್ಯರ್ಥಿಗಳ ಬಲಬಲ ಒಂದೇ ಆಗಿದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚು ಕಡಿಮೆ ತ್ರಿಕೋನ ಸ್ಪರ್ಧೆ ಖಚಿತ ಅಂತಿದಾರೆ ಇಲ್ಲಿನ ರಾಜಕೀಯ ಚಿಂತಕರು.