ದಾವಣಗೆರೆ: ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಕ್ಷೇತ್ರದಲ್ಲಿ ಇದೀಗ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಗೂ ಮುನ್ನ ಗೆಲವು ತಮ್ಮದೇ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದಾರೆ. ಆದರೆ, ಮತದಾರ ಯಾರಿಗೆ ಮಣೆ ಹಾಕುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಹಾಲಿ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ ಪಿ ರೇಣುಕಾಚಾರ್ಯ ಬಿಜೆಪಿಯಿಂದ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ ಈ ಬಾರಿ ಇವರನ್ನು ಸೋಲಿಸಲು ಕಾಂಗ್ರೆಸ್ ತಂತ್ರ ಪ್ರತಿತಂತ್ರ ರೂಪಿಸುತ್ತಿದ್ದು, ಸೂಕ್ತ ಅಭ್ಯರ್ಥಿಯ ಹುಡುಕಾಟಲ್ಲಿದೆ. ಇದರ ಮಧ್ಯೆ ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ತಮ್ಮದೇಯಾದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿವೆ. ಆದರೆ, ಜೆಡಿಎಸ್ ಹೊರತು ಉಳಿದ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಸದ್ಯಕ್ಕೆ ಕಾದು ನೋಡುವ ತಂತ್ರ ರೂಪಿಸಿವೆ. ಹಾಗಾಗಿ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
ಶತಾಯಗತಾಯ ಹಾಲಿ ಶಾಸಕರಿಗೆ ಸೋಲಿನ ರುಚಿ ತೋರಿಸಬೇಕು ಎಂದು ಕಾಂಗ್ರೆಸ್ ತಂತ್ರ ಮಾಡಿದರೆ, ಇತ್ತ ರೇಣುಕಾಚಾರ್ಯ ಈಗಾಗಲೇ ಕ್ಷೇತ್ರವಾರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ರಾಜಕೀಯದ ಹಾವು-ಏಣಿ ಆಟದಿಂದ ಮತ್ತು ಬದಲಾದ ಕೆಲವು ಸನ್ನಿವೇಶಗಳಿಂದ ಕ್ಷೇತ್ರ ಯಾರ ಕೈ ವಶವಾಗುತ್ತದೆ ಅನ್ನೋದು ಕುತೂಹಲ ತರಿಸಿದೆ.
ಟಿಕೆಟ್ ಆಕಾಂಕ್ಷಿತರು: ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವುದು ಹೆಚ್ಚು. ಆದರೆ, ಬದಲಾದ ರಾಜಕೀಯ ಸ್ಥಿತ್ಯಂತರ ಜೆಡಿಎಸ್ ಸೇರಿದಂತೆ ಇತರೆ ಪಕ್ಷಕ್ಕೂ ವರದಾನವಾಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಪ್ರಮುಖ ಮೂರು ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಜಿಪಂ ಸದಸ್ಯ ಎಂಆರ್ ಮಹೇಶ್ ಸೇರಿದಂತೆ ಬಿಜೆಪಿಯಿಂದ ಹಲವರು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಇತ್ತ ಕಾಂಗ್ರೆಸ್ನಿಂದಲೂ ಕೂಡ ಟಿಕೆಟ್ಗಾಗಿ ಪೈಪೋಟಿ ಜೋರಾಗಿದೆ. ಮಾಜಿ ಶಾಸಕ ಡಿ ಜಿ ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪಬಿ, ಮುಖಂಡ ಸಿದ್ದಪ್ಪ ಸೇರಿದಂತೆ ಹಲವರು ಕೈ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್ನಿಂದ ಘೋಷಿತ ಅಭ್ಯರ್ಥಿ ಶಿವಮೂರ್ತಿಗೌಡ ಕಣಕ್ಕಳಿಯಲಿದ್ದಾರೆ.