ಅಥಣಿ(ಬೆಳಗಾವಿ):ಅಥಣಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಕೈ ತಪ್ಪುತಿದ್ದಂತೆ ಬಿಜೆಪಿಯಿಂದ ಹೊರಗಡೆ ಬರುವುದಕ್ಕೆ ನಿರ್ಧಾರ ಮಾಡಿದ್ದು, ನಾಳೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಬಿಜೆಪಿ ವರಿಷ್ಠರು ನನಗೆ ಕೊನೆ ಹಂತದಲ್ಲಿ ಟಿಕೆಟ್ ತಪ್ಪಿಸಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ. ನಾಳೆ ಕಾರ್ಯಕರ್ತರ ಸಭೆ ಕರೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ಅಭಿಮಾನಿಗಳು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ. ನಾಳೆ ಸಂಜೆ ಐದು ಗಂಟೆಗೆ ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಅವರ ಮೇಲೆ ನನಗೆ ಸಿಟ್ಟಿಲ್ಲ. ಅವರು ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ. ಈ ದೇಶದ ಪ್ರಧಾನಿ ಮಂತ್ರಿ ಆಗಲೆಂದು ಬಯಸುವೆ. ನಾನು ಎಲ್ಲಿಯೇ ಇರಲಿ, ಹೇಗಿಯೇ ಇರಲಿ, ನನಗೊಬ್ಬರು ಗುರುವಿದ್ದಾರೆ. ಅವರ ಹೆಸರು ಹೇಳಲು ಇಚ್ಛಿಸುವುದಿಲ್ಲ. ನನಗೆ ಅವರೇ ಗುರುಗಳು. ಅವರ ಬಗ್ಗೆ ಅಪಾರವಾದ ಪೂಜ್ಯ ಭಾವನೆ ಇದೆ. ಆ ಗುರು ಬಟ್ಟಲಿನಲ್ಲಿ ವಿಷ ಕೊಟ್ರು ಕುಡಿಯುವೆ. ನನ್ನ ನಿರ್ಧಾರವನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದೇನೆ ಅಂತಾ ಸವದಿ ಭಾವುಕರಾದರು.
ಲಕ್ಷ್ಮಣ ಸವದಿ ಬೆಂಬಲಕ್ಕೆ ಯಾವ ನಾಯಕರು ನಿಲ್ಲಲಿಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅವರು ಎಲ್ಲೆ ಇದ್ರು ಅವರು ನಮ್ಮ ಸ್ನೇಹಿತರು. ಅವರೇ ಲಕ್ಷ್ಮಣ ಸವದಿ ಒಂದು ಗಿಡದ ತಪ್ಪಲು ಎಂದಿದ್ದಾರೆ. ಹೀಗಾಗಿ ಈ ಗಿಡದ ತಪ್ಪಲಿನಿಂದ ಏನೂ ಪ್ರಯೋಜನ ಇಲ್ಲ ಎಂದು ಗೊತ್ತಾಗಿರಬಹುದು. ಆ ತಪ್ಪಲು ಎಲ್ಲಿ ಹೋಗುತ್ತೋ ಗೊತ್ತಿಲ್ಲ. ರಮೇಶ ಜಾರಕಿಹೊಳಿ ರಾಜ್ಯದಲ್ಲಿಯೇ ಬಲಾಢ್ಯರಿದ್ದಾರೆ. ರಮೇಶ ಜಾರಕಿಹೊಳಿಯವರಿಗೆ ಇನ್ನಷ್ಟು ಶಕ್ತಿ ನೀಡಲಿ. ಸ್ನೇಹಿತರಿಗೆ ಜಾರಕಿಹೊಳಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಜಾರಕಿಹೊಳಿಗೂ ಮುಂದಿನ ಸಿಎಂ ಆಗುವ ಯೋಗ ಇದೆ. ರಾಜ್ಯದ ಎಲ್ಲ ಸಮಕಾಲೀನ ನಾಯಕರಿಗೆ ಅಭಿನಂದನೆ ತಿಳಿಸುತ್ತೇನೆ. 20 ವರ್ಷಗಳ ಕಾಲದಲ್ಲಿ ನಾನು ಬಿಜೆಪಿಯಲ್ಲಿ ಏನಾದ್ರೂ ತಪ್ಪು ಮಾಡಿದ್ರೆ ಕ್ಷಮಿಸಿ ಎಂದರು.